ಆರ್ಆರ್ಆರ್ ಎಂಬ ಬ್ಲಾಕ್ಬಸ್ಟರ್ ಸಿನಿಮಾ ಮೂಲಕ ವಿಶ್ವಾದ್ಯಂತ ಸದ್ದು ಮಾಡಿರುವ ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ದೇವರ'. ಕೊರಟಾಲ ಶಿವ ಈ ಪ್ಯಾನ್ ಇಂಡಿಯಾ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ಕಲಾವಿದರು ಅಭಿನಯಿಸುತ್ತಿದ್ದು, ಮತ್ತೋರ್ವ ಬಾಲಿವುಡ್ ನಟನ ಎಂಟ್ರಿಯಾಗಲಿದೆಯಂತೆ.
ಕೊರಟಾಲ ಶಿವ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ. ಬಾಲಿವುಡ್ ಬೆಡಗಿಗಿದು ಟಾಲಿವುಡ್ನ ಚೊಚ್ಚಲ ಚಿತ್ರ. ಬಾಲಿವುಡ್ ನಟ ಸೈಫ್ ಆಲಿ ಖಾನ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಬಾಲಿವುಡ್ನ ಬಾಬಿ ಡಿಯೋಲ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊದಲ ಭಾಗದಲ್ಲಿ ತಾರಕ್ಗೆ ಎದುರಾಗಲಿರುವ ವಿಲನ್ ಪಾತ್ರದಲ್ಲಿ ಸೈಫ್ ಇರಲಿದ್ದಾರೆ. ಇದೀಗ ಸಿನಿಮಾಗೆ ಸಂಬಂಧಿಸಿದಂತೆ ಮತ್ತೊಂದು ಕುತೂಹಲಕಾರಿ ಸುದ್ದಿ ಬಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಾಬಿ ಡಿಯೋಲ್ ಕೂಡ ಮತ್ತೋರ್ವ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕೊನೆಗೆ ತೆರೆಮೇಲೆ ಬರುವ ಅವರ ಪಾತ್ರ 'ದೇವರ ಭಾಗ 2'ರಲ್ಲಿ ನಿರ್ಣಾಯಕವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.