ಬೆಂಗಳೂರು : ಹಳದಿ ಮಾರ್ಗಕ್ಕೆ ಟಿಆರ್‌ಎಸ್‌ಎಸ್‌ಎಲ್ ಕಂಪನಿ ತನ್ನ ಮೊದಲ ರೈಲನ್ನು (ಬೋಗಿಗಳು) ಕಳಿಸಿದ್ದು, ಇದು ಜನವರಿ 15 ರ ವೇಳೆಗೆ ಹೆಬ್ಬಗೋಡಿ ಮೆಟ್ರೊ ಡಿಪೋವನ್ನು ತಲುಪಲಿದೆ.
ಈಗಾಗಲೇ ಈ ಮಾರ್ಗಕ್ಕಾಗಿ ಫೆಬ್ರವರಿಯಲ್ಲಿ ಚೀನಾದಿಂದ ಚಾಲಕ ರಹಿತವಾಗಿಯೂ ಸಂಚರಿಸಬಹುದಾದ ಪ್ರೊಟೋಟೈಪ್ ರೈಲು ಬಂದಿದೆ. ಸಿಬಿಟಿಸಿ (ಕಮ್ಯೂನಿಕೇಶನ್ಸ್ ಬೇಸ್ಡ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನದಿಂದ ರೈಲು ಸಂಚರಿಸಲಿದೆ. ಮೂರನೇ ರೈಲು ಬಂದ ಬಳಿಕ ಸಿಎಂಆರ್‌ಎಸ್, ರೈಲ್ವೆ ಮಂಡಳಿಯ ಒಪ್ಪಿಗೆ ಪಡೆದು 13 ನಿಮಿಷಕ್ಕೊಂದರ ಆವರ್ತನದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ.
ಇನ್ನು ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕಾಗಿ ಚೀನಾದಿಂದ ಪ್ರೊಟೋಟೈಪ್ (ಮೂಲಮಾದರಿ) ರೈಲು ಜನವರಿ 10ರ ವೇಳೆಗೆ ಪೀಣ್ಯ ಡಿಪೋ ತಲುಪಲಿದ್ದು, ಕೆಲ ದಿನಗಳ ಕಾಲ ವಿವಿಧ ತಪಾಸಣೆಗೆ ಒಳಪಟ್ಟು ಬಳಿಕ ಹಳಿಗಿಳಿಯಲಿದೆ.
ಪೀಣ್ಯ ಡಿಪೋ ತಲುಪುವ ಬೋಗಿಗಳನ್ನು ಜೋಡಿಸಿ ರೈಲು ರೂಪಿಸಿಕೊಳ್ಳಲಿದೆ. ಡಿಟಿಜಿ (ಡಿಸ್ಟೆನ್ಸ್ ಟು ಗೋ) ತಂತ್ರಜ್ಞಾನದ ರೈಲಾದರೂ ಹೊಸ ಕಂಪನಿಯಿಂದ ಬರುತ್ತಿರುವ ಈ ರೈಲುಗಳನ್ನು ಮುಖ್ಯ ಟ್ರ್ಯಾಕ್‌ಗೆ ತರುವ ಮುನ್ನ ವಿವಿಧ ತಪಾಸಣೆಗೆ ಒಳಪಡಿಸಬೇಕಾಗಿದೆ. ರಾತ್ರಿ ವೇಳೆ ಪ್ರಾಯೋಗಿಕ ಸಂಚಾರ ನಡೆಸಲಾಗಲಿದೆ. ಬಳಿಕ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯಿಂದ (ಆರ್‌ಡಿಎಸ್‌ಒ) ಅಧಿಕಾರಿಗಳು ಪರಿಶೀಲಿಸಿ ಒಪ್ಪಿಗೆ ಸೂಚಿಸಿದ ಬಳಿಕ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಇದಕ್ಕೆ ಕೆಲ ಸಮಯ ಹಿಡಿಯಲಿದೆ.
''ಯಾವುದೇ ಹೊಸ ಕಂಪನಿಯಿಂದ ರೈಲು ಬಂದರೂ ಅದನ್ನು ತಪಾಸಣೆ ಮಾಡಿಕೊಳ್ಳಬೇಕು. ನೇರಳೆ ಮಾರ್ಗಕ್ಕೆ ಬಂದ ರೈಲನ್ನು ಪ್ರಾಯೋಗಿಕ ಸಂಚಾರ ನಡೆಸಿ, ಆರ್‌ಡಿಎಸ್‌ಒ ಅನುಮತಿ ಪಡೆದು ಸಂಚಾರಕ್ಕೆ ತರಲಾಗುವುದು'' ಎಂದು ಬಿಎಂಆರ್‌ಸಿಎಲ್ ಸಿಪಿಆರ್‌ಒ ಯಶವಂತ ಚೌಹಾಣ್ ಹೇಳಿದ್ದಾರೆ.
ಇದನ್ನೂ ಓದಿ : ಪ್ರಯಾಣಿಕರೇ ಗಮನಿಸಿ: ಕ್ರಿಸ್ಮಸ್, ಹೊಸ ವರ್ಷದ ಹಿನ್ನೆಲೆ ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ - SPECIAL TRAIN SERVICE