ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ 2025-26ರ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಮಹಿಳೆಯರಿಗೆ ನೆರವಾಗುವ ಹೊಸ ಯೋಜನೆಯೂ ಕೂಡ ಆಯವ್ಯಯದ ಗಮನಾರ್ಹ ಘೋಷಣೆಗಳಲ್ಲಿ ಒಂದಾಗಿದೆ.
ಘೋಷಣೆಯ ಪ್ರಮುಖ ಅಂಶಗಳು:
1. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ 5 ಲಕ್ಷ ಮಹಿಳೆಯರಿಗೆ ಹೊಸ ಯೋಜನೆ : ಮಹಿಳಾ ಸಬಲೀಕರಣಕ್ಕೆ ಕೇಂದ್ರ ಬಜೆಟ್ ನೆರವು ದೊರೆತಿದ್ದು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ 5 ಲಕ್ಷ ಮಹಿಳೆಯರನ್ನು ಬೆಂಬಲಿಸುವ ಗುರಿ ಹೊಂದಿರುವ ಹೊಸ ಸಾಲ ಯೋಜನೆಯೊಂದನ್ನು ಪರಿಚಯಿಸಲಾಗಿದೆ. ಮಹಿಳೆಯರಿಗೆ ತಮ್ಮದೇ ಆದ ವ್ಯವಹಾರ ನಡೆಸಲು ಮತ್ತು ವಿಸ್ತರಿಸಲು ಸಹಾಯವಾಗಲು ಸೌಲಭ್ಯಗಳು ಲಭಿಸಲಿದೆ. ಸಾಮಾಜಿಕ-ಆರ್ಥಿಕ ಸಂಕಷ್ಟ ಪರಿಹರಿಸುವ ಮತ್ತು ವಿಶೇಷವಾಗಿ ಇತಿಹಾಸದ ಕರಾಳ ಮುಖಗಳಿಂದ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ.
2. ಐದು ವರ್ಷಗಳಲ್ಲಿ ₹2 ಕೋಟಿವರೆಗಿನ ದೀರ್ಘಾವಧಿ ಸಾಲಗಳು : ಇದು ಈ ಯೋಜನೆಯ ಇನ್ನೊಂದು ಪ್ರಮುಖ ಗಮನಾರ್ಹ ಅಂಶವಾಗಿದೆ. ಮುಂದಿನ ಐದು ವರ್ಷಗಳಲ್ಲಿ, ಅಗತ್ಯವಿರುವ ಮಹಿಳಾ ಉದ್ಯಮಿಗಳು ₹2 ಕೋಟಿಗಳವರೆಗಿನ ದೀರ್ಘಾವಧಿ ಸಾಲ ಪಡೆಯಬಹುದಾಗಿದೆ. ಈ ಸಾಲವು ಮಹಿಳೆಯರು ತಮ್ಮ ವ್ಯವಹಾರಗಳ ಪ್ರಾರಂಭಿಸಲು ಅಥವಾ ವಿಸ್ತರಿಸಲು ಸಹಾಯ ಮಾಡಲಿವೆ. ಈ ಹಣಕಾಸಿನ ಬೆಂಬಲದಿಂದ ಕೆಳ ಸಮುದಾಯದ ಅನೇಕ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ನಿವಾರಣೆಯಾಗಲಿವೆ.
3. ಸ್ಟ್ಯಾಂಡ್‌ಅಪ್ ಇಂಡಿಯಾ ಯೋಜನೆಯೇ ಮುನ್ನುಡಿ : ಈ ಹೊಸ ಯೋಜನೆಗೆ ಸರ್ಕಾರದ ಈ ಹಿಂದಿನ ಯಶಸ್ವಿ ಸ್ಟ್ಯಾಂಡ್‌ಅಪ್ ಇಂಡಿಯಾ ಯೋಜನೆಯೇ ಮುನ್ನುಡಿಯಾಗಿದೆ. ಇದು ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ಗುರಿ ಹೊಂದಿತ್ತು. ಸ್ಟ್ಯಾಂಡ್‌ಅಪ್ ಇಂಡಿಯಾ ಯೋಜನೆಯ ಅನುಷ್ಠಾನದ ಸಮಯದಲ್ಲಿ ಎದುರಿಸಿದ ಸವಾಲುಗಳನ್ನು ಪರಿಹರಿಸುವ ಮೂಲಕ, ಸರ್ಕಾರ ತನ್ನ ಕ್ರಮವನ್ನು ಪರಿಷ್ಕರಿಸಲು ಮತ್ತು ಈ ಹೊಸ ಯೋಜನೆಯ ಫಲಾನುಭವಿಗಳಿಗೆ ಗರಿಷ್ಠ ನೆರವು ಒದಗಿಸಲು ಮುಂದಾಗಿದೆ.
4. ಆನ್‌ಲೈನ್ ಸಾಮರ್ಥ್ಯ ವೃದ್ಧಿ ಮತ್ತು ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಣ : ಬಜೆಟ್ ಉದ್ಯಮಶೀಲತೆಗಾಗಿ ಆನ್‌ಲೈನ್ ಸಾಮರ್ಥ್ಯ ವೃದ್ಧಿಗೆ ಈ ಯೋಜನೆಯು ಗಮನಾರ್ಹ ಒತ್ತು ನೀಡಲಿದೆ. ಆಧುನಿಕ ವ್ಯಾಪಾರ, ವ್ಯವಹಾರಕ್ಕೆ ಅಗತ್ಯವಾದ ಕೌಶಲ್ಯಗಳೊಂದಿಗೆ ಮಹಿಳೆಯರನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾದ ಡಿಜಿಟಲ್ ತರಬೇತಿ ಕಾರ್ಯಕ್ರಮಗಳನ್ನು ಈ ಯೋಜನೆಯು ಒಳಗೊಂಡಿರಲಿದೆ. ಹೆಚ್ಚುವರಿಯಾಗಿ, ಸರ್ಕಾರವು ಉದ್ಯಮಶೀಲತಾ ಕೌಶಲ್ಯ ಕಾರ್ಯಾಗಾರಗಳನ್ನು ಆಯೋಜಿಸಲಿದೆ. ಅಲ್ಲಿ ಮಹಿಳೆಯರು ಪ್ರಾಯೋಗಿಕ ಅನುಭವ ಪಡೆಯುವುದರ ಜೊತೆಗೆ ವ್ಯವಹಾರ ನಡೆಸುವ ಕುರಿತಂತೆ ಕಲಿತುಕೊಳ್ಳಬಹುದು. ಈ ಕಾರ್ಯಾಗಾರಗಳು ವ್ಯವಹಾರ ನಿರ್ವಹಣೆ ಮತ್ತು ಹಣಕಾಸು ಯೋಜನೆಯಿಂದ ಮಾರ್ಕೆಟಿಂಗ್ ತಂತ್ರಗಳು ಮತ್ತು ಗ್ರಾಹಕರ ತೊಡಗಿಸಿಕೊಳ್ಳುವಿಕೆಯವರೆಗೆ ವಿವಿಧ ವಿಚಾರಗಳನ್ನು ಒಳಗೊಂಡಿರಲಿವೆ.
ಎಫ್ಸಿಸಿಐ ಅಧ್ಯಕ್ಷರು ಹೇಳುವುದೇನು? ಈ ಸಾಲ ಯೋಜನೆಯ ಈ ಬಗ್ಗೆ ಎಫ್ಸಿಸಿಐ ಅಧ್ಯಕ್ಷ ಹರ್ಷವರ್ಧನ್ ಅಗರ್ವಾಲ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ಮಹಿಳೆಯರ ಉದ್ಯೋಗವನ್ನು ಉತ್ತೇಜಿಸುವುದು ಆರ್ಥಿಕತೆಗೆ ಬಹಳ ಮುಖ್ಯವಾಗಿದೆ. ಮಹಿಳಾ ಉದ್ಯೋಗದ ಪ್ರಮಾಣವು ಪ್ರಸ್ತುತ 40%ರಷ್ಟಿದೆ, ನಾವು ಅದನ್ನು 70%ಕ್ಕೆ ಹೇಗೆ ಕೊಂಡೊಯ್ಯುತ್ತೇವೆ? ಕಳೆದ ಎರಡು ವರ್ಷಗಳಲ್ಲಿ ಸರ್ಕಾರವು ತನ್ನ ಬಜೆಟ್ ಮೂಲಕ ಮಹಿಳೆಯರು ಮತ್ತು ಅವರ ಉದ್ಯೋಗಾವಕಾಶದ ಮೇಲೆ ಗಮನಹರಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಇದು ಅದರ ಮುಂದುವರಿಕೆಯಾಗಿದೆ ಮತ್ತು ಇದು ಉತ್ತಮ ಹೆಜ್ಜೆ" ಎಂದಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2025 ಪ್ರಮುಖ ಘೋಷಣೆಗಳು ಹೀಗಿವೆ
ಎಫ್ಸಿಸಿಐ ಮಾಜಿ ಅಧ್ಯಕ್ಷೆ ನೈನಾ ಲಾಲ್ ಕಿದ್ವಾಯಿ, "ಮಹಿಳೆಯರು ಉದ್ಯಮಿಗಳಾಗಲು ಅನುವು ಮಾಡಿಕೊಡುವ ಯಾವುದೇ ವಿಚಾರವಾದರೂ ಅದು ಮಹತ್ವದ್ದಾಗಿದೆ. ಸಾಲಕ್ಕಾಗಿ ಯಾವುದೇ ಸಂಸ್ಥೆಗಳನ್ನು ಸಂಪರ್ಕಿಸುವಾಗ ಮಹಿಳೆಯರು ತಾರತಮ್ಯವನ್ನು ಎದುರಿಸುತ್ತೇವೆ ಎಂದು ಅನೇಕರು ಹೆಚ್ಚಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದ್ದರಿಂದ, ಸಹಾಯ ಮಾಡುವ ಯಾವುದಾದರೂ - ಅದು ಸಾಲ ನೀಡುವುದು ಅಥವಾ ಸರ್ಕಾರಿ ಬೆಂಬಲಿತ ಯೋಜನೆಗಳು ಮಹಿಳೆಯರ ಬೆಳವಣಿಗೆಯಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡಲಿವೆ" ಎಂದು ಈಟಿವಿ ಭಾರತಕ್ಕೆ ತಿಳಿಸಿದರು.
ಇದನ್ನೂ ಓದಿ: ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಈ ಬಾರಿಯೂ ಚೊಂಬು ಕೊಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ ಟೀಕೆ