ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೆಹಲಿ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೊದಲ ನೇರ ವಿಮಾನ ಹಾರಾಟವನ್ನು ಇಂದಿನಿಂದ (ಫೆ.1) ಆರಂಭಿಸಲಾಗಿದೆ. ಈಗಾಗಲೇ ಇಂಡಿಗೋ ಈ ಸೇವೆಯನ್ನು ಸಂಜೆಗೆ ನೀಡುತ್ತಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದಿನಿಂದ ಬೆಳಗ್ಗೆ ಈ ಸೇವೆ ಆರಂಭಿಸಿದೆ. ಕರ್ನಾಟಕ ಕರಾವಳಿ ಮತ್ತು ಪಕ್ಕದ ಪ್ರದೇಶಗಳ ಜನರಿಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಬೆಳಗ್ಗೆ ಈ ಸೇವೆ ಸಿಗಲಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ನ ವಿಮಾನ IX 1552, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (IXE) ಇಂದು ಬೆಳಗ್ಗೆ 6.40ಕ್ಕೆ ಹೊರಟು ಬೆಳಗ್ಗೆ 9.35ಕ್ಕೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (DEL) ಇಳಿಯುವ ಮೂಲಕ ಮೊದಲ ಪ್ರಯಾಣ ಆರಂಭಿಸಿತು. ಏರ್ ಇಂಡಿಯಾ ಎಕ್ಸ್ಪ್ರೆಸ್ನ ವಿಮಾನ IX 2768, ಬೆಳಗ್ಗೆ 6.40ಕ್ಕೆ ರಾಷ್ಟ್ರ ರಾಜಧಾನಿಯಿಂದ ಹೊರಟು ಬೆಳಗ್ಗೆ 9.35ಕ್ಕೆ ಮಂಗಳೂರಿಗೆ ಬಂದಿಳಿಯಿತು.
ಮಂಗಳೂರು-ದೆಹಲಿ ವಿಮಾನದಲ್ಲಿ 167 ಪ್ರಯಾಣಿಕರು ಪ್ರಯಾಣಿಸಿದರೆ, ರಾಷ್ಟ್ರ ರಾಜಧಾನಿಯಿಂದ ಆರಂಭವಾದ ವಿಮಾನದಲ್ಲಿ 144 ಪ್ರಯಾಣಿಕರು ಕರಾವಳಿ ನಗರಕ್ಕೆ ಆಗಮಿಸಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರೋಡ್ರೋಮ್ ಮತ್ತು ಅಗ್ನಿಶಾಮಕ ದಳ (ARFF) ಘಟಕವು ಉದ್ಘಾಟನಾ ವಿಮಾನಕ್ಕೆ ನೀರಿನ ಕ್ಯಾನನ್ ಸೆಲ್ಯೂಟ್ ಅನ್ನು ಪ್ರದರ್ಶಿಸಿತು. ಇದನ್ನು ಅನುಭವಿಸಿದ ಪ್ರಯಾಣಿಕರು ಸಂತೋಷಗೊಂಡರು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 4, 2025 ರಂದು ಪ್ರತಿ ಶನಿವಾರ ಪುಣೆಗೆ ಎರಡು ವಾರಾಂತ್ಯದ ವಿಮಾನಗಳನ್ನು ಪರಿಚಯಿಸಿದ ಬೆನ್ನಲ್ಲೇ ಈ ಹೊಸ ವಿಮಾನ ಆರಂಭವಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಾದೇಶಿಕ ವೈಮಾನಿಕ ಸಂಪರ್ಕಕ್ಕೆ ಒತ್ತು: ಬಿಹಾರಕ್ಕೆ ಭರ್ಜರಿ ಕೊಡುಗೆ