ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರು, ಈ ಗೌರವವನ್ನು ಕರ್ನಾಟಕದ ಜನರಿಗೆ ಅರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಅನಂತನಾಗ್ ಅವರು ಅಭಿಪ್ರಾಯ ಹಂಚಿಕೊಂಡಿರುವ ಸಂದರ್ಶನದ ವಿಡಿಯೋವನ್ನು ಪಿಟಿಐ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
"ನನಗೆ ಸಿಕ್ಕ ಪದ್ಮವಿಭೂಷಣ ಪ್ರಶಸ್ತಿಯನ್ನು ಕನ್ನಡ ಸಿನಿಮಾಗಳನ್ನು ಪ್ರೀತಿಸುವ ಕನ್ನಡಿಗರಿಗೆ ಅರ್ಪಿಸುತ್ತೇನೆ. ಕನ್ನಡ ಸಿನಿಮಾರಂಗದಲ್ಲಿ 50 ವರ್ಷಗಳ ಪಯಣ ನನ್ನದು. ಅದಕ್ಕಿಂತ ಹಿಂದೆ ನಾಲ್ಕರಿಂದ ಐದು ವರ್ಷಗಳ ಕಾಲ ರಂಗಭೂಮಿಯಲ್ಲಿದ್ದೆ. ನಂತರ ನಾನು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟೆ, ಆಗ ಆರಂಭವಾದ ಪಯಣ ಈಗಲೂ ಮುಂದುವರಿದಿದೆ" ಎಂದರು.
"ಮೂರು ವರ್ಷಗಳ ಹಿಂದೆ ಯಾವಾಗ ಪ್ರಧಾನಿ ಮೋದಿ ಇನ್ನು ಮುಂದೆ ಪದ್ಮ ಪ್ರಶಸ್ತಿಗಳನ್ನು ನೀಡುವ ಬಗ್ಗೆ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ ಇರಬೇಕು ಎಂದು ಘೋಷಿಸಿದರೋ, ಅದಕ್ಕೆ ನನ್ನ ಕನ್ನಡ ಜನರು ತುಂಬಾನೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಕಳೆದ ಮೂರು ವರ್ಷಗಳಿಂದ ಕನ್ನಡಿಗರು ನನ್ನ ಹೆಸರನ್ನು ಪ್ರಶಸ್ತಿಗೆ ಸೂಚಿಸುತ್ತಾ ಬಂದಿದ್ದಾರೆ. ಕೊನೆಗೂ ಆ ಗೌರವ ನನ್ನ ಪಾಲಿಗೆ ಬಂದಿದೆ. ತುಂಬಾ ಸಂತಸವಾಗಿದ್ದು, ಈ ಗೌರವವನ್ನು ನಾನು ಕರ್ನಾಟಕದ ಜನರಿಗೆ, ಕನ್ನಡ ನಾಡಿನ ಚಿತ್ರರಸಿಕರಿಗೆ ಅರ್ಪಿಸುತ್ತೇನೆ" ಎಂದು ಹೇಳಿದರು.