ಹೈದರಾಬಾದ್: ಓರ್ಮ್ಯಾಕ್ಸ್ ಮೀಡಿಯಾ, ಉದ್ಯಮ ಟ್ರ್ಯಾಕರ್ ಮತ್ತು ಮಾಧ್ಯಮ ಸಲಹಾ ಸಂಸ್ಥೆ ಮುಂಬರುವ ದಿನಗಳಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ಸಿದ್ಧವಾಗಿರುವ ಬಹುನಿರೀಕ್ಷಿತ ತೆಲುಗು ಚಲನಚಿತ್ರಗಳ ಪಟ್ಟಿ ಬಹಿರಂಗಪಡಿಸಿದೆ. ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್‌ಗಳಿಂದ ಹಿಡಿದು ಆ್ಯಕ್ಷನ್ ಎಂಟರ್‌ಟೈನರ್‌ಗಳವರೆಗೆ ಹಲವು ಚಿತ್ರಗಳು ಪಟ್ಟಿಯಲ್ಲಿವೆ. 2024ರ ಆಗಸ್ಟ್ ತಿಂಗಳಿನಿಂದ ಬಿಡುಗಡೆಯಾಗಲು ಸಜ್ಜಾಗಿರುವ ಚಲನಚಿತ್ರಗಳನ್ನು ಸಂಸ್ಥೆ ನೀಡಿದೆ.
ಪುಷ್ಪ 2 ಸಿನಿಮಾ ಬಿಡುಗಡೆ ಮುಂದೂಡಿಕೆಯಾದ್ದರೂ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಚಿತ್ರಗಳ ಟ್ರೇಲರ್ ಇನ್ನೂ ಬಿಡುಗಡೆಯಾಗಿಲ್ಲ. ಅದರ ಹೊರತಾಗಿಯೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲು ಸಿದ್ಧಗೊಂಡಿರುವ ಟಾಪ್ ಟಾಲಿವುಡ್ ಚಿತ್ರಗಳ ಪಟ್ಟಿ ಹೀಗಿದೆ ಎಂದು ಓರ್ಮ್ಯಾಕ್ಸ್ ಮೀಡಿಯಾ ತನ್ನ ಇನ್ಸ್ಟಾಗ್ರಾಮ್ ಅಧಿಕೃತ ಖಾತೆಯಲ್ಲಿ ಮಾಹಿತಿ ನೀಡಿದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2: ದ ರೂಲ್ ಮುಂಚೂಣಿಯಲ್ಲಿದೆ. ಕಳೆದ ಹಲವು ದಿನಗಳಿಂದ ಕುತೂಹಲ ಮೂಡಿಸುತ್ತಿರುವ ಚಿತ್ರ ಇದಾಗಿದ್ದರಿಂದ ಓರ್ಮ್ಯಾಕ್ಸ್ನ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಿರವಾಗಿ ಉಳಿದಿದೆ. ಚಿತ್ರದ ನಿರಂತರ ಜನಪ್ರಿಯತೆ ಅದನ್ನು ಮುಂಚೂಣಿಗೆ ತಂದಿದೆ. ಟ್ರೇಲರ್ ಕೂಡ ಬಿಡುಗಡೆಯಾಗಿಲ್ಲ. ಆದರೂ ಇತರ ಸಿನಿಮಾಗಳಿಗಿಂತ ಹೆಚ್ಚು ಪ್ರಚಲಿತದಲ್ಲಿದೆ. ಹಾಗಾಗಿ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡಬಲ್ಲ ಸಂಭಾವ್ಯ ಚಿತ್ರಗಳಲ್ಲಿ ಇದು ಮೊದಲನೇ ಚಿತ್ರ ಎಂದು ಭವಿಷ್ಯ ನುಡಿದಿದೆ.
ಸುಕುಮಾರ್ ನಿರ್ದೇಶನ ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ, ಪುಷ್ಪ 2 ಚಿತ್ರ ಡಿಸೆಂಬರ್ 6ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 15ಕ್ಕೆ ಬಿಡುಗಡೆಯಾಗಬೇಕಿದ್ದ ಪುಷ್ಪ-ದಿ ರೂಲ್(ಪುಷ್ಪ 2) ಕಾರಣಾಂತರಗಳಿಂದ ಮುಂದೂಡಲಾಗಿದೆ.
ಜೂ.ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಅಭಿನಯದ ಆ್ಯಕ್ಷನ್ ಥ್ರಿಲ್ಲರ್ ದೇವರ ಭಾಗ 1 ಕೂಡ ಪಟ್ಟಿಗೆ ಬಂದಿರುವ ಮತ್ತೊಂದು ಬಹು ನಿರೀಕ್ಷಿತ ಚಿತ್ರವಾಗಿದೆ. ಚಿತ್ರದಲ್ಲಿ ಎನ್‌ಟಿಆರ್ ಅವರನ್ನು ಉಗ್ರಾವಾತಾರದಲ್ಲಿ ತೋರಿಸುವ ನಿರೀಕ್ಷೆಯಿದೆ. ಅವರ ಕೆಲವು ಭಯಾನಕ ದೃಶ್ಯಗಳು ಈಗಾಗಲೇ ಜಾಲತಾಣದಲ್ಲಿ ಜಾಗ ಪಡೆದಿವೆ. ಸೆಪ್ಟೆಂಬರ್ 27 ರಂದು ತೆರೆಗೆ ಬರಲು ಸಿದ್ಧಗೊಂಡಿದೆ. ಅಂದುಕೊಂಡ ಕೆಲಸಗಳು ಪೂರ್ಣಗೊಂಡರೆ ಈ ಮೊದಲು ಹೇಳಿದ ದಿನದಂದೇ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರ ಟ್ರೇಲರ್ ಕೂಡ ಬಿಡುಗಡೆಯಾಗಿಲ್ಲ. ಹೀಗಿದ್ದರೂ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಕೊರಟಾಲಾ ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಎನ್‌ಟಿಆರ್ ಜೊತೆ ಜಾನ್ವಿ ಕಪೂರ್, ಬಾಲಿವುಡ್ ನಟ ಸೈಫ್ ಆಲಿ ಖಾನ್, ನಟ ಪ್ರಕಾಶ್ ರೈ ಕಾಣಿಸಲಿದ್ದಾರೆ. ಚಿತ್ರ ಎರಡು ಭಾಗದಲ್ಲಿ ಬಿಡುಗಡೆಯಾಲಿದೆ. ಚಿತ್ರಕ್ಕೆ ಸುಧಾಕರ್ ಮಿಕ್ಕಿಲಿನೆನಿ ಮತ್ತು ಕೊಸರಾಜು ಹರಿಕೃಷ್ಣ ಬಂಡವಾಳ ಹೂಡಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಇದರ ಪ್ರಸ್ತುತಿ ಮಾಡಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಅನಿರುದ್ಧ್ ರವಿಚಂದರ್ ಜೊತೆಗೆ ಸಂತೋಷ್ ವೆಂಕಿ ಕೂಡ ಸಂಗೀತ ನಿರ್ದೇಶನ ನೀಡಿದ್ದಾರೆ. ಆರಂಭದಲ್ಲಿ ಏಪ್ರಿಲ್ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿತ್ತಾದರೂ ಬಳಿಕ ಅಕ್ಟೋಬರ್ 10ರಂದು 'ದೇವರ' ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಕೊನೆಗೆ ಸೆಪ್ಟೆಂಬರ್ 27ಕ್ಕೆ ಚಿತ್ರ ಬಿಡುಗಡೆ ಮಾಡುವ ನಿರ್ಧಾರ ಪ್ರಕಟಿಸಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪವನ್ ಕಲ್ಯಾಣ್ ನಟನೆಯ OG, ತೇಜ ಸಜ್ಜ ಅವರ ಜೈ ಹನುಮಾನ್ ಮತ್ತು ಪ್ರಭಾಸ್ ಅಭಿನಯದ ಸ್ಪಿರಿಟ್ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಬಹುನಿರೀಕ್ಷಿತ ಚಿತ್ರಗಳಾಗಿವೆ. ಈ ಪ್ರತಿಯೊಂದು ಚಿತ್ರವು ವಿಶಿಷ್ಟವಾದ ಕಥೆ ಹೊಂದಿವೆ. ಇದಲ್ಲದೇ ಹೈವೋಲ್ಟೇಜ್ ಹಾಗೂ ವೈಭವದ ದೃಶ್ಯಗಳು ನೋಡುಗರನ್ನು ಕೇಂದ್ರೀಕರಿಸಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಈ ಚಿತ್ರಗಳ ಟ್ರೇಲರ್‌ಗಳು ಇನ್ನೂ ಬಿಡುಗಡೆಯಾಗದಿರುವುದು ಸಿನಿ ರಸಿಕರಿಗೆ ಬೇಸರ ತರಿಸಿದೆ. ಹಾಗಾಗಿ ಚಿತ್ರಗಳ ಬಿಡುಗಡೆಯ ಜೊತೆಗೆ ದೊಡ್ಡ ಪರದೆಯ ಮೇಲೆ ಈ ಚಿತ್ರಗಳನ್ನು ಅನುಭವಿಸುವ ಅವಕಾಶಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ:ಸದ್ಯಕ್ಕೆ ಪುಷ್ಪ 2 ಬಿಡುಗಡೆ ಇಲ್ಲ: ಅಲ್ಲು ಅರ್ಜುನ್ ಅಭಿಮಾನಿಗಳೆಗೆ ನಿರಾಸೆ - Pushpa 2 Release Postponed