ಮಫ್ತಿ ಪ್ರೀಕ್ವೆಲ್ 'ಭೈರತಿ ರಣಗಲ್' ಕಳೆದ ಶುಕ್ರವಾರ ಅದ್ಧೂರಿಯಾಗಿ ತೆರೆಕಂಡು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಮುಖ್ಯಭೂಮಿಕೆಯ ಸಿನಿಮಾದ ಬಾಕ್ಸ್ ಆಫೀಸ್ ವ್ಯವಹಾರವೂ ಉತ್ತಮವಾಗಿ ಸಾಗಿದೆ. ನಿರೀಕ್ಷೆಯಂತೆ ಗಳಿಕೆ ಅಂಕಿ- ಅಂಶ ಉತ್ತಮವಾಗಿದ್ದು, ಕನ್ನಡ ಚಿತ್ರರಂಗಕ್ಕೆ ಶಿವಣ್ಣನ ಸಿನಿಮಾ ಗೆಲುವು ತಂದುಕೊಟ್ಟಿದೆ.
ಭೈರತಿ ರಣಗಲ್ ಬಾಕ್ಸ್ ಆಫೀಸ್ ಕಲೆಕ್ಷನ್: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ ಈ ಭೈರತಿ ರಣಗಲ್ ಇದೇ ನವೆಂಬರ್ 15ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈವರೆಗೆ ಅಂದರೆ ನಾಲ್ಕು ದಿನಗಳಲ್ಲಿ ಸಿನಿಮಾ 10.05 ಕೋಟಿ ರೂ. ಕಲೆಕ್ಷನ್ (ನೆಟ್ ಕಲೆಕ್ಷನ್) ಮಾಡಿದೆ. ಅದರಲ್ಲೂ ಸಂಡೇ ಶೋಗಳು ಬಹುತೇಕ ಹೌಸ್ಫುಲ್ ಆಗಿದ್ದವು. ಅಂದಿನ ವ್ಯವಹಾರ ಕೂಡಾ ಉತ್ತಮವಾಗಿತ್ತು.
ಶುಕ್ರವಾರ 2.3 ಕೋಟಿ ರೂಪಾಯಿ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಭೈರತಿ ರಣಗಲ್ ಎರಡನೇ ದಿನದ ಗಳಿಕೆಯಲ್ಲಿ ಏರಿಕೆ ಕಂಡಿತು. ಶನಿವಾರ 2.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಈ ಸಿನಿಮಾ ಭಾನುವಾರದಂದು ಭರ್ಜರಿ ಪ್ರದರ್ಶನ ಕಂಡಿದೆ. ಹೌದು, ಸಿನಿಮಾ ತೆರೆಕಂಡ ಮೂರನೇ ದಿನ 3.4 ಕೋಟಿ ರೂ. ಕಲೆಕ್ಷನ್ ಮಾಡಿದ ಚಿತ್ರ ಕಳೆದ ದಿನ ಸೋಮವಾರದಂದು 1.65 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ವಾರದ ದಿನಗಳಲ್ಲಿ ಸಿನಿಮಾದ ಗಳಿಕೆ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿನವರಲ್ಲಿದೆ. ಈ ಅಂಕಿ - ಅಂಶಗಳು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯನ್ನು ಆಧರಿಸಿದೆ. ಅದಾಗ್ಯೂ, ಅಭಿಮಾನಿಗಳು ಚಿತ್ರತಂಡದಿಂದ ಮಾಹಿತಿ ನಿರೀಕ್ಷಿಸಿದ್ದಾರೆ.
ಇದನ್ನೂ ಓದಿ: ಉಗ್ರಂ ಮಂಜುರನ್ನೇ ಮೌನಗೊಳಿಸಿದ ಶೋಭಿತಾ ಶೆಟ್ಟಿ: ಗಂಭೀರ ಸನ್ನಿವೇಶದಲ್ಲೂ ನಸುನಕ್ಕ ಹನುಮಂತ-ಧನರಾಜ್
ನರ್ತನ್ ಮತ್ತು ಶಿವರಾಜ್ಕುಮಾರ್ ಕಾಂಬಿನೇಶನ್ನಲ್ಲಿ ಮೂಡಿಬಂದಿದ್ದ ಮಫ್ತಿ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕಂಡಿತ್ತು. 2017ರ ಡಿಸೆಂಬರ್ 1ರಂದು ಬಿಡುಗಡೆಯಾಗಿದ್ದ ಮಫ್ತಿ ಚಿತ್ರದ ಪ್ರೀಕ್ವೆಲ್ 'ಭೈರತಿ ರಣಗಲ್'. ಈ ಪ್ರಾಜೆಕ್ಟ್ ಘೋಷಣೆಯಾದಾಗಿನಿಂದಲೂ ಸಾಕಷ್ಟು ಸದ್ದು ಮಾಡಿತ್ತು. ಕನ್ನಡ ಚಿತ್ರರಂಗದ ಬಹುಬೇಡಿಕೆ ನಟನ ಸಿನಿಮಾವಾದ ಹಿನ್ನೆಲೆ ಬಹುಭಾಷಿಗರ ಗಮನವನ್ನೂ ಸೆಳೆದಿತ್ತು. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡಿದ ಸಿನಿಮಾ ನವೆಂಬರ್ 15ರಂದು ಬಿಡುಗಡೆಯಾಗಿ ತನ್ನ ಪ್ರದರ್ಶನ ಮುಂದುವರಿಸಿದೆ.
ಇದನ್ನೂ ಓದಿ: ಪತ್ನಿ ಬೇಬಿಬಂಪ್ಗೆ ಮುತ್ತಿಟ್ಟ ವಸಿಷ್ಠ ಸಿಂಹ: ಸ್ಪೆಷಲ್ ಫೋಟೋಶೂಟ್ ಹಂಚಿಕೊಂಡ ನಟಿ ಹರಿಪ್ರಿಯಾ
ನಟ ಶಿವರಾಜ್ಕುಮಾರ್ ಅವರಿಗೆ ಚಂದನವನದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿರುವ ರುಕ್ಮಿಣಿ ವಸಂತ್ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ, ಛಾಯಾಸಿಂಗ್, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಅವಿನಾಶ್, ಬಾಬು ಹಿರಣ್ಣಯ್ಯ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ, ರವಿ ಬಸ್ರೂರ್ ಅವರ ಸಂಗೀತವಿದೆ. ನವೀನ್ ಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಗುಣ ಅವರ ಕಲಾ ನಿರ್ದೇಶನ ಮತ್ತು ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜಾ ಸಾಹಸ ನಿರ್ದೇಶನವಿದೆ.