ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಎಐ, ಟೆಲಿಮೆಡಿಸಿನ್, ಟೆಲಿ ಐಸಿಯುಗಳ ಮೂಲಕ ಅತ್ಯಾಧುನಿಕ ಗುಣಮಟ್ಟದ ಆರೋಗ್ಯ ಸೇವೆ ನೀಡುವತ್ತ ನಮ್ಮ ಸರ್ಕಾರ ಚಿತ್ತ ಹರಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಸ್ಟಾರ್ಟ್‌ಅಪ್ ಸ್ಪ್ರಿಂಗ್ ಬೋರ್ಡ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರೋಗ್ಯ ಕ್ಷೇತ್ರವನ್ನು ಸುಧಾರಿಸುವಲ್ಲಿ ತಂತ್ರಜ್ಞಾನದ ಪಾತ್ರ ಹೆಚ್ಚಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಆರೋಗ್ಯ ಸೇವೆಯ ಅಗತ್ಯತೆ ಇದೆ. ಈ ಕಾರಣಕ್ಕಾಗಿ ಎಐ, ಟೆಲಿಮೆಡಿಸಿನ್ ಮತ್ತು ಟೆಲಿ - ಐಸಿಯುಗಳ ಸಮರ್ಪಕ ಬಳಕೆಯೊಂದಿಗೆ ಅತ್ಯಾಧುನಿಕ ಆರೋಗ್ಯ ಸೇವೆ ನೀಡಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಲೆಟ್ಸ್ ವೆಂಚರ್‌ನ ಸಂಸ್ಥಾಪಕಿ ಶಾಂತಿ ಮೋಹನ್ ಮಾತನಾಡಿ, ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮದ ಅಗತ್ಯಗಳ ನಡುವಿನ ಅಂತರ ಕಡಿಮೆ ಮಾಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ಟಾರ್ಟ್‌ಅಪ್‌ಗಳು ತಜ್ಞರೊಂದಿಗೆ ಸಂಪರ್ಕಿಸಿ ಮಾರ್ಗದರ್ಶನವನ್ನು ಪಡೆಯಲು ಹಾಗೂ ಆರ್ಥಿಕ ನೆರವು ಪಡೆಯಲು ಇದು ವೇದಿಕೆಯಾಗಿದೆ ಎಂದು ಹೇಳಿದರು.
ಐಟಿ - ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಎಕ್ರೂಪ್ ಕೌರ್ ಮಾತನಾಡಿ, ರಾಜ್ಯದಲ್ಲಿ ನವೀನ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಒತ್ತು ನೀಡುವುದರ ಜೊತೆಗೆ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದೇವೆ. ಕ್ವಾಂಟಮ್ ಎಐ, ಹವಾಮಾನ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಆವಿಷ್ಕಾರಗಳ ಮೇಲೆ ಕೇಂದ್ರೀಕರಿಸಲು ಇನ್ನೋವೇಟಿವ್ ಕ್ಯಾಂಪಸ್ ಅನ್ನು ಉತ್ತೇಜಿಸುತ್ತಿದ್ದೇವೆ. ಇದು ಸ್ಟಾರ್ಟ್‌ಅಪ್‌ಗಳು, ಕಾರ್ಪೊರೇಷನ್‌ಗಳು ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ನೆರವಾಗುತ್ತದೆ. ಈ ಶೃಂಗಸಭೆಯಲ್ಲಿ 100ಕ್ಕೂ ಹೆಚ್ಚು ಹೂಡಿಕೆದಾರರು ಮತ್ತು 200ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಭಾಗವಹಿಸುತ್ತಿದ್ದು, ಸ್ಟಾರ್ಟ್‌ಅಪ್‌ಗಳಿಗೆ ಅನುಭವಿ ತಜ್ಞರಿಂದ ಮಾರ್ಗದರ್ಶನ ಬಂಡವಾಳ ಹೂಡಿಕೆ ಲಭಿಸಲಿದೆ. ಸರ್ಕಾರವು 2025ರಲ್ಲಿ ಸ್ಟಾರ್ಟ್‌ಅಪ್ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ. ಈ ಶೃಂಗಸಭೆ ಮೂಲಕ ರಾಜ್ಯದ ಸ್ಟಾರ್ಟ್‌ಅಪ್‌ಗಳ ಬಲವರ್ಧನೆಗೆ ಕ್ರಮ ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: 108 ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ಸಚಿವ ದಿನೇಶ್ ಗುಂಡೂರಾವ್