ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ 2023ರಲ್ಲಿ ತಮ್ಮ ಮೇಣದ ಪ್ರತಿಮೆ (Wax statue) ನೋಡಲು ದುಬೈನ ಮ್ಯಾಡಮ್ ಟುಸ್ಸಾಡ್ಸ್ ಮ್ಯೂಸಿಯಂಗೆ ಭೇಟಿ ನೀಡಿದ್ದರು. ಕಳೆದ ವರ್ಷವೇ ಈ ವ್ಯಾಕ್ಸ್ ಸ್ಟ್ಯಾಚು ಅನಾವರಣಗೊಳ್ಳಬೇಕಿತ್ತು. ಆದ್ರೆ ವಿಳಂಬವಾಗಿದೆ. ಮ್ಯೂಸಿಯಂ ಅಂತಿಮವಾಗಿ ಖ್ಯಾತ ನಟನ ಮೇಣದ ಪ್ರತಿಮೆಯನ್ನು ಉದ್ಘಾಟಿಸಲು ಸಜ್ಜಾಗಿದೆ. ಅಲ್ಲು ಅರ್ಜುನ್ ಈವೆಂಟ್‌ಗಾಗಿ ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ.
ಮ್ಯೂಸಿಯಂನ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ ಹಂಚಿಕೊಂಡ ವಿಡಿಯೋ, ನಟನ ಮೇಣದ ಪ್ರತಿಮೆಯ ಒಂದು ಚಿಕ್ಕ ನೋಟವನ್ನು ಒದಗಿಸುತ್ತದೆ. ಸೌತ್ ಸ್ಟೈಲಿಶ್ ಐಕಾನ್ ಎಂದೇ ಜನಪ್ರಿಯರಾಗಿರುವ ಅಲ್ಲು ಅರ್ಜುನ್ ಕಂಪ್ಲೀಟ್ ಬ್ಲ್ಯಾಕ್ ಸೂಟು ಬೂಟಿನಲ್ಲಿ ಮ್ಯೂಸಿಯಂಗೆ ಆಗಮಿಸುವ ದೃಶ್ಯದೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ.
ವ್ಯಾಕ್ಸ್ ಸ್ಟ್ಯಾಚುನಲ್ಲಿ ನಟ ಕೆಂಪು ಜಾಕೆಟ್ ಧರಿಸಿರುವಂತೆ ಕಾಣುತ್ತದೆ. ಅಲ್ಲದೇ ಅವರ ಹಿಟ್ ಚಿತ್ರ ಪುಷ್ಪಾ: ದಿ ರೈಸ್‌ನ ಐಕಾನಿಕ್ ಪೋಸ್ನಲ್ಲಿ ಪ್ರತಿಮೆ ರೆಡಿ ಮಾಡಿದಂತೆ ತೋರುತ್ತಿದೆ. ಅಲ್ಲದೇ "ಮೇ ಜುಕೆಗಾ ನಹೀ ಸಾಲಾ" ಎಂಬ ಫೇಮಸ್ ಡೈಲಾಗ್ ಸಹ ಈ ವಿಡಿಯೋದಲ್ಲಿ ಸದ್ದು ಮಾಡುತ್ತದೆ. ಪ್ರತಿಮೆಯ ಒಂದು ಚಿಕ್ಕ ನೋಟವಷ್ಟೇ ಈ ವಿಡಿಯೋದಲ್ಲಿ ಸಿಕ್ಕಿದ್ದು, ಶೀಘ್ರದಲ್ಲೇ ಸಂಪೂರ್ಣ ನೋಟ ಬಹಿರಂಗಗೊಳ್ಳಲಿದೆ.
ಬಿಗ್ ರಿವೀಲ್ಗಾಗಿ ಮಾರ್ಚ್ 28ರಂದು ಅಲ್ಲು ಅರ್ಜುನ್ ದುಬೈಗೆ ಭೇಟಿ ನೀಡಲಿದ್ದಾರೆ ಎಂದು ಮ್ಯೂಸಿಯಂನ ಪೋಸ್ಟ್ ಪ್ರಕಟಿಸಿದೆ. "ಅಲ್ಲು ಅರ್ಜುನ್ ದುಬೈಗೆ ಬರುತ್ತಿದ್ದಾರೆ. ಗುರುವಾರ, 28ರಂದು ರಾತ್ರಿ 8 ಗಂಟೆಗೆ ಮ್ಯಾಡಮ್ ಟುಸ್ಸಾಡ್ಸ್ ದುಬೈಗೆ ಬನ್ನಿ. ಬಿಗ್ ರಿವೀಲ್ ಕ್ಷಣದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀವೂ ಗೆಲ್ಲಬಹುದು. ಕಾಮೆಂಟ್‌ಗಳಲ್ಲಿ ನಿಮ್ಮೊಂದಿಗೆ ಯಾರನ್ನು ಕರೆತರುತ್ತೀರಿ ಎಂಬುದನ್ನು ಟ್ಯಾಗ್ ಮಾಡಿ" ಎಂದು ಪೋಸ್ಟ್ನ ಕ್ಯಾಪ್ಷನ್ ತಿಳಿಸಿದೆ.