ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದುಷ್ಕರ್ಮಿಯೋರ್ವ ಚಾಕುವಿನಿಂದ ದಾಳಿ ಮಾಡಿರುವ ಘಟನೆ ನಡೆದಿದೆ. ಹಲ್ಲೆಯಿಂದ ನಟ ಗಾಯಗೊಂಡಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬೈ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ದುಷ್ಕರ್ಮಿಯೊಬ್ಬ ಕಳ್ಳತನಕ್ಕೆಂದು ಬಂದಿದ್ದ. ಈ ವೇಳೆ ನಟನಿಗೆ ಆತ ಚಾಕುವಿನಿಂದು ಇರಿದು ಪರಾರಿಯಾಗಿದ್ದಾನೆ. ಘಟನೆ ವೇಳೆ ನಟನ ಕುಟುಂಬಸ್ಥರು ಕೂಡ ಮನೆಯಲ್ಲಿದ್ದರು.
ಆರು ಬಾರಿ ಇರಿದ ದುಷ್ಕರ್ಮಿ: ದುಷ್ಕರ್ಮಿ ಚಾಕುನಿಂದ ಹಲ್ಲೆ ಮಾಡಿದ ಪರಿಣಾಮ ನಟ ಸೈಫ್ ಬೆನ್ನಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಮತ್ತು ಶಂಕಿತನನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ನಸುಕಿನ ಜಾವ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಮನೆಗೆ ದುಷ್ಕರ್ಮಿ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ. ಈ ವೇಳೆ ಮನೆಯಲ್ಲಿ ಶಬ್ದ ಕೇಳಿಬಂದಿದ್ದರಿಂದ ಮನೆಯ ಕೆಲಸದವರಿಗೆ ಎಚ್ಚರವಾಗಿತ್ತು. ಆಗ ದುಷ್ಕರ್ಮಿಯನ್ನು ನೋಡಿದ ಸಿಬ್ಬಂದಿ ಜೋರಾಗಿ ಕೂಗಿಕೊಂಡಿದ್ದರು. ಈ ಶಬ್ದದಿಂದ ಎಚ್ಚರಕೊಂಡು ನಟ ಸೈಫ್ ಅಲಿ ಖಾನ್ ಬೆಡ್ ರೂಂನಿಂದ ಹೊರಬಂದಿದ್ದರು. ಆಗ ನಟ ಮತ್ತು ದುಷ್ಕರ್ಮಿ ಮಧ್ಯೆ ಗಲಾಟೆ ಆಗಿದೆ. ಈ ವೇಳೆ, ದುಷ್ಕರ್ಮಿ ಚಾಕುವಿನಿಂದ ಆರು ಬಾರಿ ಇರಿದಿದ್ದಾನೆ.
ನಟನಿಗೆ ಶಸ್ತ್ರಚಿಕಿತ್ಸೆ: ನಟನಿಗೆ ದುಷ್ಕರ್ಮಿ ಆರು ಬಾರಿ ಇರಿದಿದ್ದಾನೆ. ಎರಡು ಗಾಯಗಳು ಗಂಭೀರವಾಗಿವೆ. ಬೆನ್ನು ಮೂಳೆವರೆಗೆ ಗಾಯವಾಗಿದ್ದು, ತಜ್ಞ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ ಎಂದು ಲೀವಾವತಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಸೈಫ್ ತಂಡ ಪ್ರತಿಕ್ರಿಯೆ: ನಟ ಸೈಫ್ ಅಲಿ ಖಾನ್ ಮನೆಯಲ್ಲಿ ದರೋಡೆ ಯತ್ನ ನಡೆದಿದೆ. ಆಸ್ಪತ್ರೆಯಲ್ಲಿ ಸದ್ಯ ನಟನಿಗೆ ಶಸ್ತ್ರ ಚಕಿತ್ಸೆ ನಡೆಯುತ್ತಿದ್ದು, ಅಭಿಮಾನಿಗಳು ಮತ್ತು ಮಾಧ್ಯಮಗಳು ಶಾಂತವಾಗಿರಬೇಕು. ಪೊಲಿಸರು ಕ್ರಮ ಕೈಗೊಂಡಿದ್ದಾರೆ ಎಂದು ಸೈಫ್ ಅಲಿ ಖಾನ್ ತಂಡ ಪ್ರತಿಕ್ರಿಯೆ ನೀಡಿದೆ.
ಘಟನೆ ವೇಳೆ ಕರೀನಾ ಮತ್ತು ಅವರ ಮಕ್ಕಳು ಕೂಡ ಮನೆಯಲ್ಲಿದ್ದು, ಎಲ್ಲರೂ ಸೇಫ್ ಆಗಿದ್ದಾರೆ. ಸೈಫ್ ಅಲಿ ಖಾನ್ ಅವರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದಗಳು ಎಂದು ಕರೀನಾ ಅವರ ತಂಡ ತಿಳಿಸಿದೆ.
ಇದನ್ನೂ ಓದಿ: 2025ರ ಬಹುನಿರೀಕ್ಷಿತ ಸಿನಿಮಾ: ಸಲ್ಮಾನ್ ಸಿಕಂದರ್ or ಯಶ್ ಟಾಕ್ಸಿಕ್; ಯಾವುದು ನಂ.1?