ಬಳ್ಳಾರಿ : ಇದೊಂದು ವಿಶೇಷ ಜಾತ್ರೆ. ಜಾತ್ರೆಯ ದಿನ ಆ ಊರಿನಲ್ಲಿ ಯಾವೊಬ್ಬ ವ್ಯಕ್ತಿಯೂ ಇರಲ್ಲ. ಮನುಷ್ಯರು ಮಾತ್ರವಲ್ಲ, ಗ್ರಾಮದಲ್ಲಿರುವ ದನಕರುಗಳಿಂದಿಡಿದು ಸಾಕು ಪ್ರಾಣಿಗಳು ಆ ಊರಿನಲ್ಲಿ ಇರುವುದಿಲ್ಲ. ಮನೆಗಳಿಗೆಲ್ಲ ಜನರು ಬೀಗ ಹಾಕಿರುತ್ತಾರೆ. ಇಡೀ ಊರಿಗೆ ಊರೇ ಖಾಲಿ ಖಾಲಿಯಾಗಿರುತ್ತೆ!
ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರುನೂರು ಎಂಬ ಗ್ರಾಮದಲ್ಲಿ ವಿಶಿಷ್ಟ ಆಚರಣೆಯ ಜಾತ್ರೆ ನಡೆಯೋದು ಗ್ರಾಮದ ಒಳಗಲ್ಲ, ಬದಲಾಗಿ ಗ್ರಾಮದ ಹೊರವಲಯದಲ್ಲಿ. ಇದಕ್ಕಾಗಿ ಇಲ್ಲಿಯ ಜನತೆ ತಮ್ಮ ಗ್ರಾಮ ಬಿಟ್ಟು ಜಾತ್ರೆಗೆ ಹೋಗ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಗ್ರಾಮದ ಜನರೆಲ್ಲ ಜಾತ್ರೆಗೆ ಹೋಗಲೇಬೇಕು. ಮನೆಯಲ್ಲಿ ಯಾರೂ ಇರುವಂತಿಲ್ಲ.
ಹೌದು, ಇದು ಚೋರನೂರು ಗ್ರಾಮದಲ್ಲಿ ನಡೆಯುವ ಗುಳೇದ ಲಕ್ಕಮ್ಮ ದೇವಿ ಜಾತ್ರೆಯ ವೈಶಿಷ್ಟತೆ. ಈ ಜಾತ್ರೆಯ ವಿಶೇಷತೆ ಏನಂದ್ರೆ ಜಾತ್ರೆಯ ದಿನ ಈ ಗ್ರಾಮದಲ್ಲಿ ಯಾರೂ ಕೂಡ ಇರೋದಿಲ್ಲ. ಮನೆಗಳಿಗೆ ಬೀಗ ಹಾಕಿಕೊಂಡು, ದವಸ ಧಾನ್ಯಗಳನ್ನ ತೆಗೆದುಕೊಂಡು, ಗ್ರಾಮದಿಂದ 3 ಕಿ.ಮೀ ದೂರದಲ್ಲಿ ಸಣ್ಣ ಸಣ್ಣ ಟೆಂಟ್ಗಳನ್ನ ಹಾಕಿಕೊಳ್ಳುತ್ತಾರೆ. ಜಾತ್ರೆಗೆ ಬಂದ ಬೀಗರು ಕೂಡ ಇಲ್ಲಿಯೇ ಉಳಿಯುತ್ತಾರೆ. ಊರ ಹೊರಗಡೆಯೇ ಅಡುಗೆ ಮಾಡಿಕೊಂಡು ಹಬ್ಬದ ಊಟ ಸವಿಯುತ್ತಾರೆ.
ಈ ಜಾತ್ರೆಯಲ್ಲಿ ಸಿಹಿಗಿಂತ ಹೆಚ್ಚಾಗಿ ರೊಟ್ಟಿ ಊಟ ಹೆಚ್ಚು. ಎಳ್ಳು ಹಚ್ಚಿದ ಸಜ್ಜೆ ಹಾಗೂ ಜೋಳದ ರೊಟ್ಟಿ, ಹತ್ತಾರು ಬಗೆಯ ಕಾಳುಗಳು, ಸೊಪ್ಪು, ಐದಾರು ಬಗೆಯ ಚಟ್ನಿ ಪುಡಿ, ಎಣ್ಣೆ ಬದನೆಕಾಯಿ ಹೀಗೆ ತರಹೇವಾರಿ ಪಲ್ಯಗಳು ಸಿದ್ಧವಾಗುತ್ತವೆ. ಗ್ರಾಮದಿಂದ 3 ಕಿಮೀ ದೂರದಲ್ಲಿರುವ ದೇವಸ್ಥಾನಕ್ಕೆ ಲಕ್ಕಮ್ಮ ದೇವಿಯ ಪುತ್ರಿಯನ್ನ ಮೆರವಣಿಗೆ ಮೂಲಕ ತರಲಾಗುತ್ತದೆ. ಆಗ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಊಟ ಮಾಡುತ್ತಾರೆ.
![ಮನೆಗಳಿಗೆ ಬೀಗ](https://etvbharatimages.akamaized.net/etvbharat/prod-images/16-01-2025/23333450_thumbnkk.jpg)
ಈ ಗ್ರಾಮದಲ್ಲಿ ಶತಮಾನಗಳಿಂದಲೂ ಗುಳೇದ ಲಕ್ಕಮ್ಮ ದೇವಿಯ ಜಾತ್ರೆಯನ್ನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಗ್ರಾಮದ ಆರಾಧ್ಯದೈವರಾಗಿರುವ ಲಕ್ಕಮ್ಮ ದೇವಿಯನ್ನ ಮದುವೆ ಮಾಡಿದ ನಂತರ ಗ್ರಾಮದ ಎಲ್ಲರೂ ಸಂಭ್ರಮದಿಂದ ಗಂಡನ ಮನೆಗೆ ಕಳುಹಿಸಿ ಸಂಜೆ ವಾಪಸ್ ಗ್ರಾಮಕ್ಕೆ ಹಿಂತಿರುಗುವ ಹಿನ್ನಲೆಯುಳ್ಳ ಈ ಜಾತ್ರೆ ಸೌಹಾರ್ದತೆ, ಸಹಭೋಜನ ಸಹಬಾಳ್ವೆಯ ಪ್ರತೀಕವಾಗಿ ಇವತ್ತಿಗೂ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಈ ಬಗ್ಗೆ ಗ್ರಾಮದ ಮುಖಂಡ ಮಂಜುನಾಥ ಹಿರೇಮಠ ಮಾತನಾಡಿ, ''ಯಾವುದೇ ಜಾತಿ-ಧರ್ಮಭೇದವಿಲ್ಲದೇ ಎಲ್ಲ ಧರ್ಮಿಯರು ಕೂಡ ಈ ಜಾತ್ರೆಯನ್ನ ಆಚರಿಸುತ್ತೇವೆ. ಎಲ್ಲಾ ಧರ್ಮಿಯರು ಕೂಡ ಜಾತ್ರೆಯ ದಿನ ಊರು ಖಾಲಿ ಮಾಡಿ ಹೊರಗಡೆ ಇರುತ್ತಾರೆ. ಜಾತ್ರೆಯ ದಿನ ಯಾವುದೇ ಸಾಕು ಪ್ರಾಣಿ ಕೂಡಾ ಗ್ರಾಮದಲ್ಲಿರುವುದಿಲ್ಲ. ಈ ಜಾತ್ರೆಯ ಉದ್ದೇಶವಿಷ್ಟೇ, ಎಲ್ಲ ಜನಾಂಗದವರಲ್ಲಿ ಸಮಾನತೆ, ಸಾಮರಸ್ಯ ತರುವುದಾಗಿದೆ. ಗ್ರಾಮಸ್ಥರೆಲ್ಲರೂ ಗ್ರಾಮ ತೊರೆದು ಹೋದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ, ಕಳ್ಳತನವೂ ನಡೆದಿಲ್ಲ'' ಎಂದು ತಿಳಿಸಿದ್ದಾರೆ.
![ಲಕ್ಕಮ್ಮ ದೇವಿ ಜಾತ್ರೆ](https://etvbharatimages.akamaized.net/etvbharat/prod-images/16-01-2025/23333450_thumbnj.jpg)
ಈ ಗ್ರಾಮದಲ್ಲಿ ಜಾತ್ರೆಯ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ಸರ್ಕಾರಿ ಶಾಲೆಗಳು, ಕಾಲೇಜು, ಗ್ರಾಮ ಪಂಚಾಯಿತಿ, ಅಂಚೆ-ಕಚೇರಿ ಕೊನೆಗೆ ಲಕ್ಕಮ್ಮ ದೇವಿಯ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ಲಕ್ಕಮ್ಮ ದೇವಿಯ ಗಂಡನ ಊರು ಚೋರನೂರು ಗ್ರಾಮವಾದರೆ, ಲಕ್ಕಮ್ಮ ದೇವಿಯ ತವರೂರು ಗುಡೇರಹಳ್ಳಿ. ಈ ಎರಡೂ ಗ್ರಾಮದ ಮಧ್ಯೆದಲ್ಲಿ ಜಾತ್ರೆ ನಡೆಯುವುದು ಅನಾದಿ ಕಾಲದಿಂದ ನಡೆದುಕೊಂಡುಬಂದ ಪದ್ಧತಿ.
ಇದನ್ನೂ ಓದಿ : 8 ಲಕ್ಷ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿದ ಗವಿಸಿದ್ದೇಶ್ವರ ಮಹಾರಥೋತ್ಸವ - KOPPAL JATRE 2025
ಇದನ್ನೂ ಓದಿ: 5 ಮಂಗಳವಾರ ಊರಿಗೆ ಊರೇ ಖಾಲಿ: ಹಾವೇರಿಯ ಈ ಗ್ರಾಮಕ್ಕೆ ಅಂದು ಪ್ರವೇಶವೂ ನಿರ್ಬಂಧ!