ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕಾಗಿ ಚೀನಾದ ಸಿಆರ್‌ಆರ್‌ಸಿ ನಿರ್ಮಿತ ಆರು ಬೋಗಿಗಳ ಮೊದಲ ಪ್ರೊಟೊಟೈಪ್ ರೈಲು ಬಂದಿದ್ದು, ಪೀಣ್ಯ ಮೆಟ್ರೋ ಡಿಪೋದಲ್ಲಿ ಇದನ್ನು ಜೋಡಿಸಿಕೊಂಡು ಪರೀಕ್ಷಾರ್ಥ ಟ್ರ್ಯಾಕ್‌ಗೆ ಸ್ಥಳಾಂತರಿಸಲಾಗಿದೆ.
ಚೀನಾದಿಂದ ಚೆನ್ನೈ ಬಂದರಿಗೆ ಬಂದ ಆರು ಬೋಗಿಗಳನ್ನು ಟ್ರಕ್ ಮೂಲಕ ರಸ್ತೆ ಮಾರ್ಗದಲ್ಲಿ ಬೆಂಗಳೂರಿಗೆ ತರಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಇವನ್ನು ಸ್ವೀಕರಿಸಿವೆ. ಚೀನಾದಿಂದ ಬಂದ ಮೊದಲ ಡಿಸ್ಟೆನ್ಸ್ ಟು ಗೋ (ಡಿಟಿಜಿ) ತಂತ್ರಜ್ಞಾನ ಸ್ವರೂಪದ ರೈಲು ಇದಾಗಿದೆ. ಎಲೆಕ್ಟ್ರಿಕಲ್ ಪರೀಕ್ಷೆ ಸೇರಿದಂತೆ ಮುಂದಿನ ಕೆಲ ತಿಂಗಳ ಕಾಲ ಸುಮಾರು 37 ಬಗೆಯ ವಿವಿಧ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಂಎಆರ್‌ಸಿಎಲ್ ತಿಳಿಸಿದೆ.
ಈ ರೈಲು ಪ್ರಯಾಣಿಕ ಸೇವೆಗೆ ಬರಲು ಆರು ತಿಂಗಳು ಆಗಲಿದೆ. ಯಾವುದೇ ಹೊಸ ಮಾದರಿ ರೈಲು ಬಂದರೂ ಕೂಡ ಸಂಚಾರಕ್ಕೆ ಮೊದಲು ರಿಸರ್ಚ್ ಡಿಸೈನ್ ಆ್ಯಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಪ್ರಮಾಣ ಪತ್ರ ಅಗತ್ಯವಾಗಿದೆ. ಪರೀಕ್ಷೆಗಳ ಬಳಿಕ ರಾತ್ರಿಯ ವೇಳೆ ಮುಖ್ಯ ಲೈನ್‌ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗುವುದು. ಬಳಿಕ ಹೊಸ ರೈಲುಗಳಿಗಾಗಿ ಲೋಕೋಪೈಲಟ್‌ಗಳ ನೇಮಕಾತಿ ಮಾಡಿಕೊಂಡು ಅವರಿಗೆ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದೆ.
ನೂತನ ಮೆಟ್ರೋ ಫೀಡರ್ ಮಾರ್ಗ ಪರಿಚಯಿಸಲು ಮುಂದಾದ ಬಿಎಂಟಿಸಿ: ಮಹಾನಗರ ಸಾರಿಗೆ ಸಂಸ್ಥೆ ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸಲು ನೂತನ ಮೆಟ್ರೋ ಫೀಡರ್ ಮಾರ್ಗವನ್ನು ಪರಿಚಯಿಸಲು ಮುಂದಾಗಿದೆ.
ಬೆಂ.ಮ.ಸಾ. ಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾ ನಿಯಂತ್ರಣ ರಹಿತ ಸೇವೆ ಹೊಂದಿರುವ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ಇಂದಿನಿಂದ ಪರಿಚಯಿಸುತ್ತಿದೆ. ಎಂಎಫ್-8ಎ ಕ್ರಮ ಸಂಖ್ಯೆಯ ವಾಹನ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಿಂದ ಶಿವಾಜಿನಗರದ ವರೆಗೆ ಸಂಚರಿಸಲಿದೆ. ಮಾರ್ಗ ಮಧ್ಯ ಮಲ್ಲೇಶ್ವರಂ ಸರ್ಕಲ್, ಗುಟ್ಟಹಳ್ಳಿ, ಮೌಂಟ್ ಕಾರ್ಮೆಲ್ ಕಾಲೇಜು, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.
ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 7.15 ಮತ್ತು 8.45, ಮಧ್ಯಾಹ್ನ 12.15, 1.30, 2.40 ಕ್ಕೆ ಮತ್ತು ಸಂಜೆಯ ವೇಳೆ 4.25 ಕ್ಕೆ ಹೊರಡಲಿದೆ. ಶಿವಾಜಿನಗರದಿಂದ ಬೆಳಗ್ಗೆ 8.5, 8.45,11.15 ಮಧ್ಯಾಹ್ನ 12.55, 2.5 ಮತ್ತು 3.45 ಕ್ಕೆ ಹೊರಟು ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ ತಲುಪಲಿದೆ.
ಓದಿ: ಮೈಸೂರಲ್ಲಿ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್