ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳ ಜೊತೆ ಜೊತೆಗೆ ನವ ಪ್ರತಿಭೆಗಳ ಚಿತ್ರಗಳೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತೆರೆ ಕಾಣುತ್ತಿವೆ. ಹೊಸಬರ ಸಿನಿಮಾ ಮೇಕಿಂಗ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಶಾರ್ಟ್ ಫಿಲ್ಮ್, ವೆಬ್ ಸೀರಿಸ್ ಮೊದಲಾದವುಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಆಧುನಿಕ ತಂತ್ರಜ್ಞಾನ ಇರುವ ಸ್ಟುಡಿಯೋಗಳ ಅವಶ್ಯಕತೆ ಇದೆ. ಹೀಗಾಗಿ ನಿರ್ಮಾಪಕ ಕಮರ್, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಸಜ್ಜಿತ ಸೌಲಭ್ಯ ಹೊಂದಿರುವ 'ರೆಡ್ ರಾಕ್' ಎಂಬ ಸ್ಟುಡಿಯೋವನ್ನು ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ್ದಾರೆ.
'ರೆಡ್ ರಾಕ್ ಸ್ಟುಡಿಯೋ' ಉದ್ಘಾಟಿಸಿದ ಪ್ರಿಯಾಂಕಾ ಉಪೇಂದ್ರ: ಬೆಂಗಳೂರಿನ ನಾಗರಬಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಸುಸಜ್ಜಿತ ಆಧುನಿಕ ಶೈಲಿಯಲ್ಲಿ 'ಕಮರ್ ಫಿಲಂ ಫ್ಯಾಕ್ಟರಿ' ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗಿರುವ 'ರೆಡ್ ರಾಕ್ ಸ್ಟುಡಿಯೋ'ವನ್ನು ಪ್ರಿಯಾಂಕಾ ಉಪೇಂದ್ರ ಉದ್ಘಾಟಿಸಿದರು. ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಚಿತ್ರರಂಗದ ಗಣ್ಯರು ಹಾಜರಿದ್ದರು.
ಸ್ಟುಡಿಯೋ ಉದ್ಘಾಟಿಸಿ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, "ಇಂದಿನ ದಿನಗಳಲ್ಲಿ ಸಿನಿಮಾಗಳಿಗೆ ಕಂಟೆಂಟ್ ಮತ್ತು ಕ್ವಾಲಿಟಿ ತುಂಬಾನೇ ಮುಖ್ಯ. ಇತ್ತೀಚೆಗೆ ಬರುತ್ತಿರುವ ಸಾಕಷ್ಟು ಹೊಸ ಸಿನಿಮಾ ಮೇಕರ್ಸ್ ಹೊಸದಾಗಿ ಯೋಚಿಸುತ್ತಿದ್ದಾರೆ. ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅಂಥವರಿಗೆ ಕೈಗೆಟಕುವ ದರದಲ್ಲಿ ತಂತ್ರಜ್ಞಾನ ಲಭ್ಯತೆಯಿದ್ದರೆ ಗುಣಮಟ್ಟದ ಸಿನಿಮಾ ಮಾಡಬಹುದು. ಅದರಂತೆ, ರೆಡ್ ರಾಕ್ ಸ್ಟುಡಿಯೋದಲ್ಲಿ ಇಂದಿನ ಸಿನಿಮಾ ಮೇಕರ್ಸ್ಗೆ ಬೇಕಾದ ಎಲ್ಲಾ ಸೌಲಭ್ಯಗಳಿದ್ದು, ಇದರಿಂದ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ" ಎಂದು ತಿಳಿಸಿದರು.