ಉತ್ತರ ಪ್ರದೇಶದ ಸುಲ್ತಾನ್‌ಪುರದ ಖ್ಯಾತ ಗಾಯಕಿ ಮತ್ತು ನಟಿ ಮಲಿಕಾ ರಜಪೂತ್ ಎಂದು ಕರೆಯಲ್ಪಡುವ ವಿಜಯ ಲಕ್ಷ್ಮಿ ಅವರಿಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ನಟಿಯ ಮೃತದೇಹ ಅವರ ನಿವಾಸದ ಕೊಠಡಿಯೊಂದರಲ್ಲಿ ಪತ್ತೆಯಾಗಿದೆ. ಘಟನೆ ಕುರಿತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮಲಿಕಾ ರಜಪೂತ್ ಅವರ ಮೃತದೇಹ ಕೋತ್ವಾಲಿ ನಗರದ ಸೀತಾಕುಂಡ್ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿದೆ. ನಟಿಯ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ವಿಷಯ ತಿಳಿದ ಕೂಡಲೇ ನೆರೆಹೊರೆಯವರು ಕೂಡ ನಟಿಯ ನಿವಾಸದ ಬಳಿ ಜಮಾಯಿಸಿದ್ದಾರೆ. ಈ ಕಠಿಣ ಸಮಯದಲ್ಲಿ ನಟಿಯ ತಾಯಿಗೆ ಸಾಂತ್ವನ ಹೇಳುತ್ತಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಾಥಮಿಕ ತನಿಖೆ ನಡೆಸಿದ್ದಾರೆ. ನಂತರ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಮೃತ ನಟಿಯ ತಾಯಿ ಸುಮಿತ್ರಾ ಸಿಂಗ್ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಈ ದುರಾದೃಷ್ಟ ಘಟನೆ ಹೇಗೆ ಸಂಭವಿಸಿದೆ ಎಂಬುದು ನಮಗೆ ತಿಳಿದಿಲ್ಲ, ಸಣ್ಣ ಸುಳಿವೂ ಕೂಡ ಸಿಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ. "ಬಾಗಿಲು ಮುಚ್ಚಿತ್ತು, ಲೈಟ್‌ಗಳು ಆನ್ ಆಗಿದ್ದವು. ನಾನು ಬಾಗಿಲು ತೆರೆಯಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ, ನಾನು ಕಿಟಕಿಯಿಂದ ಇಣುಕಿ ನೋಡಿದೆ. ಮಗಳು ನಿಂತಿರುವುದಾಗಿ ಕಂಡಿತು. ಮಗಳು ಆತ್ಮಹತ್ಯೆಗೆ ಶರಣಾದಂತೆ ಕಂಡಿದ್ದು, ಆ ಕೂಡಲೇ ನಾನು ನನ್ನ ಪತಿ ಮತ್ತು ಇತರರಿಗೆ ಕರೆ ಮಾಡಿದೆ. ಆದ್ರೆ ಆಗಾಗಲೇ ತಡವಾಗಿತ್ತು" ಎಂದು ತಿಳಿಸಿದ್ದಾರೆ.