ಚೆನ್ನೈ: ಸಿಂಧೂ ಕಣಿವೆ ನಾಗರಿಕತೆಯನ್ನು ಅರ್ಥಮಾಡಿಸುವ ಮತ್ತು ಸುಸಂಬದ್ಧ ತಿಳುವಳಿಕೆ ನೀಡುವ ಪುರಾತತ್ವಶಾಸ್ತ್ರಜ್ಞರಿಗೆ ಒಂದು ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ. ಎಗ್ಮೋರ್ ನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಭಾನುವಾರ ನಡೆದ ಸಿಂಧೂ ಕಣಿವೆ ನಾಗರಿಕತೆಯ ಆವಿಷ್ಕಾರದ ಶತಮಾನೋತ್ಸವದ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಘೋಷಣೆ ಮಾಡಿದರು.
ಮೂರು ದಿನಗಳ ವಿಚಾರ ಸಂಕಿರಣದಲ್ಲಿ ವಿಶ್ವದಾದ್ಯಂತದ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞರು, ಇತಿಹಾಸಕಾರರು ಮತ್ತು ವಿದ್ವಾಂಸರು ಭಾಗವಹಿಸಿದ್ದು, ನಾಗರಿಕತೆಯ ಬೆಳವಣಿಗೆಯ ಮಹತ್ವ ಮತ್ತು ತಮಿಳುನಾಡಿನೊಂದಿಗೆ ಅದರ ಸಂಪರ್ಕದ ಬಗ್ಗೆ ಸಂವಾದಗಳು ನಡೆದಿವೆ.
ಸಿಂಧೂ ಕಣಿವೆಯಲ್ಲಿ ಪತ್ತೆಯಾದ ಕುಂಬಾರಿಕೆಯ ವಸ್ತುಗಳ ಮೇಲೆ ಕಂಡುಬಂದ ಸುಮಾರು ಶೇ 60ರಷ್ಟು ಚಿಹ್ನೆಗಳು ತಮಿಳುನಾಡಿನಲ್ಲಿ ಉತ್ಖನನದ ಸಮಯದಲ್ಲಿ ಪತ್ತೆಯಾದ ಕಲಾಕೃತಿಗಳ ಮೇಲೆ ಪತ್ತೆಯಾದ ಚಿಹ್ನೆಗಳನ್ನೇ ಹೋಲುತ್ತವೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ತಮ್ಮ ಮುಖ್ಯ ಭಾಷಣದಲ್ಲಿ ಹೇಳಿದರು.
ಈ ಗಮನಾರ್ಹ ಹೋಲಿಕೆ ವಿದ್ವಾಂಸರಲ್ಲಿ ಅಪಾರ ಆಸಕ್ತಿಯನ್ನು ಹುಟ್ಟುಹಾಕಿದೆ ಮತ್ತು ಪ್ರಯತ್ನ ಪಟ್ಟಲ್ಲಿ ಸಿಂಧೂ ಕಣಿವೆ ನಾಗರಿಕತೆಯ ರಹಸ್ಯಗಳು ಬಹಿರಂಗವಾಗಬಹುದು ಎಂದು ಅವರು ತಿಳಿಸಿದರು. ಈ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮತ್ತಷ್ಟು ಉತ್ತೇಜಿಸಲು, ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಐರಾವತಂ ಮಹಾದೇವನ್ ಅವರ ಹೆಸರಿನಲ್ಲಿ ಸಂಶೋಧನಾ ಪೀಠದ ಸ್ಥಾಪನೆಗೆ 2 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದರು.
ಈ ಪೀಠವು ಸಿಂಧೂ ಕಣಿವೆ ನಾಗರಿಕತೆಯ ಬಗ್ಗೆ ಆಳವಾದ ಅಧ್ಯಯನಕ್ಕೆ ಅವಕಾಶ ನೀಡಲಿದೆ ಮತ್ತು ತಮಿಳುನಾಡಿನೊಂದಿಗಿನ ಅದರ ಸಂಬಂಧಗಳ ಬಗ್ಗೆ ನಿರ್ದಿಷ್ಟವಾಗಿ ಸಂಶೋಧನೆ ಮಾಡಲಿದೆ. ಟ್ಯುಟಿಕೋರಿನ್ ನ ಶಿವಕಲೈ ಬಳಿ ನಡೆಸಲಾದ ಇತ್ತೀಚಿನ ಪುರಾತತ್ವ ಸಂಶೋಧನೆಗಳು ತಮಿಳುನಾಡು ಮತ್ತು ಸಿಂಧೂ ಕಣಿವೆ ನಾಗರಿಕತೆಯ ನಡುವೆ ಖಚಿತವಾದ ಸಂಪರ್ಕವಿದೆ ಎಂಬುದನ್ನು ಸಾಬೀತುಪಡಿಸಲು ಸಂಶೋಧಕರು ತೀರಾ ಹತ್ತಿರದಲ್ಲಿದ್ದಾರೆ ಎಂಬುದು ಗಮನಾರ್ಹ. ಇಲ್ಲಿ ಪತ್ತೆಯಾದ ಆವಿಷ್ಕಾರಗಳು ಕ್ರಿ.ಪೂ 2500 ಮತ್ತು ಕ್ರಿ.ಪೂ 3000 ರ ನಡುವಿನ ನಾಗರಿಕತೆಯದ್ದಾಗಿವೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
ಕುತೂಹಲಕಾರಿ ಸಂಗತಿಯೆಂದರೆ, ತಮಿಳುನಾಡಿನ ಸಂಶೋಧನೆಗಳು ಸಿಂಧೂ ಕಣಿವೆ ನಾಗರಿಕತೆಗೆ ಸಮಾನಾಂತರವಾಗಿ ಬೆಳದು ಬಂದ ಕಬ್ಬಿಣ ಯುಗದ ನಾಗರಿಕತೆಯ ಉಪಸ್ಥಿತಿಯನ್ನು ಸೂಚಿಸುತ್ತವೆ. ಈ ನಾಗರಿಕತೆಯು ಕ್ರಿ.ಪೂ 3300 ರಿಂದ ಕ್ರಿ.ಪೂ 1300 ರವರೆಗೆ ಅಸ್ತಿತ್ವದಲ್ಲಿತ್ತು. ಸಿಂಧೂ ಕಣಿವೆ ನಾಗರಿಕತೆಯು ಈ ಸಮಯದಲ್ಲಿ ಮುಖ್ಯವಾಗಿ ತಾಮ್ರದ ವಸ್ತುಗಳನ್ನು ಬಳಸುತ್ತಿದ್ದರೆ, ತಮಿಳುನಾಡಿನಲ್ಲಿ ಕಬ್ಬಿಣದ ವಸ್ತುಗಳು ಪತ್ತೆಯಾಗಿರುವುದು ಲೋಹ ಯುಗದ ಪ್ರಗತಿಯನ್ನು ಸೂಚಿಸುತ್ತದೆ. ಈ ಕುತೂಹಲಕಾರಿ ಆವಿಷ್ಕಾರವು ಇತಿಹಾಸಕಾರರು ಮತ್ತು ಪುರಾತತ್ವಶಾಸ್ತ್ರಜ್ಞರನ್ನು ಆಕರ್ಷಿಸಿದೆ.