ಬಾಗಲಕೋಟೆ: ಮದುವೆ ಬ್ರೋಕರ್ ಗ್ಯಾಂಗ್ವೊಂದು ಹೆಣ್ಣು ಸಿಗಲಿಲ್ಲ ಎಂಬ ಕೊರಗಿನಲ್ಲಿದ್ದ ವ್ಯಕ್ತಿಗೆ ಮದುವೆ ಮಾಡಿಸಿ ನಾಲ್ಕು ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಮುಧೋಳ ನಗರದಲ್ಲಿ ನಡೆದಿದೆ. ನಗರದ ಸೋಮಶೇಖರ್ ಎಂಬಾತನಿಗೆ ಶಿವಮೊಗ್ಗದ ಮಂಜುಳಾ ಎಂಬಾಕೆಯ ಜೊತೆ ಮದುವೆ ಮಾಡಿಸಿ ವಂಚಿಸಿದ್ದಾರೆ.
ಹಣದ ಬಗ್ಗೆ ಮೊದಲೇ ಡೀಲ್; ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕಾಡುತ್ತಿದ್ದ ಸೋಮಶೇಖರನನ್ನು ಟಾರ್ಗೆಟ್ ಮಾಡಿದ್ದ ಬ್ರೋಕರ್ ಟೀಂ, ನಾವು ಹೆಣ್ಣು ಹುಡುಕಿಕೊಟ್ಟು ಮದುವೆ ಮಾಡಿಸುತ್ತೇವೆ, ತಮಗೆ 4 ಲಕ್ಷ ಹಣ ಕೊಡಬೇಕು ಎಂದು ಸೋಮಶೇಖರ್ಗೆ ತಿಳಿಸಿದ್ದರು. ಇದಕ್ಕೆ ಸೋಮಶೇಖರ್ ಒಪ್ಪಿದ್ದರು.
ವರ್ಷದ ಹಿಂದೆ ನಡೆದಿತ್ತು ಮದುವೆ; ನಂತರ ಸೋಮಶೇಖರ್ಗೆ ಈಗಾಗಲೇ ಎರಡು ಮದುವೆಯಾಗಿದ್ದ ಶಿವಮೊಗ್ಗದ ಮಹಿಳೆ ಮಂಜುಳಾ ಎಂಬಾಕೆಯನ್ನು ಕರೆತಂದು ಮುಧೋಳ ನಗರದ ಕಾಳಿಕಾ ದೇವಸ್ಥಾನದಲ್ಲಿ ಒಂದು ವರ್ಷದ ಹಿಂದೆ ಬ್ರೋಕರ್ ಟೀಂ ಮದುವೆ ಮಾಡಿಸಿತ್ತು. ಬಳಿಕ ಫೀಸ್ ರೂಪದಲ್ಲಿ ಸೋಮಶೇಖರ್ರಿಂದ 4 ಲಕ್ಷ ರೂ. ಪಡೆದು ಪರಾರಿಯಾದ ಬಗ್ಗೆ ವರದಿಯಾಗಿತ್ತು.
ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಕೂಡ ಎಸ್ಕೇಪ್ ಆಗಿದ್ದಳು. ಪತ್ನಿ ಬಗ್ಗೆ ವಿಚಾರಿಸಲು ಹೋದ ವೇಳೆ ಈಗಾಗಲೇ ಆಕೆಗೆ ಎರಡು ಮದುವೆಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ. ತಾನು ವಂಚನೆಗೊಳಗಾಗಿರುವುದು ಗೊತ್ತಾಗುತ್ತಿದ್ದಂತೆ ಸೋಮಶೇಖರ್ ಬ್ರೋಕರ್ ಟೀಂಗೆ ನಾಲ್ಕು ಲಕ್ಷ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಅವರು ಹಣ ನೀಡದೇ ಇದ್ದಾಗ ಸೋಮಶೇಖರ್ ಮುಧೋಳ ಪೊಲೀಸ್ ಠಾಣೆಯಲ್ಲಿ ಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಪ್ರತಿಕ್ರಿಯಿಸಿ, "ಮದುವೆ ಮಾಡಿಸಿ ಹಣ ಹೊಡೆಯುವ ದೊಡ್ಡ ಜಾಲವೇ ಇದೆ. ಈ ಗ್ಯಾಂಗ್ ಎಲ್ಲಿದೆ ಎಂದು ತಿಳಿಯಲು ತನಿಖೆ ನಡೆಸುತ್ತಿದ್ದೇವೆ. ಈ ಜಾಲದಲ್ಲಿರುವ ಆರೋಪಿಗಳು ಬೆಳಗಾವಿ, ರಾಮದುರ್ಗ, ಶಿವಮೊಗ್ಗ, ಧಾರವಾಡ ಮೂಲದವರಾಗಿದ್ದು, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತೇವೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ರೀತಿಯ ವಂಚನೆ ಪ್ರಕರಣ ಇದೇ ಮೊದಲಾಗಿದೆ. ಎಲ್ಲವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಿಕ್ಷಕಿಯ ವರ್ಗಾವಣೆಗೆ ಲಂಚ: ಡಿಡಿಪಿಐ, ಕಚೇರಿ ಅಧೀಕ್ಷಕ ಲೋಕಾಯುಕ್ತ ಬಲೆಗೆ