ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನು ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ ಎಂದು ಪತ್ನಿ ಗೀತಾ ಶಿವರಾಜ್‌ಕುಮಾರ್ ಹಾಗೂ ಬಾಮೈದ ಮಧು ಬಂಗಾರಪ್ಪ ಅವರು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆಯು ಡಾ. ಮುರುಗೇಶ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿದೆ. ''ಶಸ್ತ್ರಚಿಕಿತ್ಸೆ ವೇಳೆ ಮತ್ತು ನಂತರದ ಆರೈಕೆ ಸಮಯದಲ್ಲಿ ಶಿವರಾಜ್‌ಕುಮಾರ್ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿತ್ತು'' ಎಂದು ಡಾ. ಮುರುಗೇಶ ಮನೋಹರನ್ ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
''ಸದ್ಯ ಸುಗಮ ಚೇತರಿಕೆಗೆ ನೆರವಾಗಲು ಅಗತ್ಯ ಚಿಕಿತ್ಸೆ ಮುಂದುವರೆಸಲಾಗಿದೆ. ಪರಿಣತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ತಂಡದಿಂದ ಅತ್ಯುತ್ತಮ ಆರೈಕೆ ನಡೆಯುತ್ತಿದೆ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಹಾಗೂ ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ. ಅವರ ಚೇತರಿಕೆ ಕುರಿತು ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು'' ಎಂದು ಗೀತಾ ಶಿವರಾಜ್‌ಕುಮಾರ್ ಮಾಹಿತಿ ನೀಡಿದ್ದಾರೆ.