ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ಹಾಗೂ ಬಾಮೈದ ಮಧು ಬಂಗಾರಪ್ಪ ವಿಡಿಯೋ ಸಂದೇಶದ ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಇದೀಗ ಪುತ್ರಿ ನಿವೇದಿತಾ ಕೂಡಾ ತಂದೆಯ ಆರೋಗ್ಯದ ಕುರಿತು ಪೋಸ್ಟ್ ಮಾಡಿದ್ದಾರೆ.
''ದೇವರ ಕೃಪೆಯಿಂದ ತಂದೆಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣರಾಗಿರುವ ಮಿಯಾಮಿ ಹೆಲ್ತ್ ಕೇರ್ನಲ್ಲಿ ಅಸಾಧಾರಣ ಸೇವೆ ಒದಗಿಸಿದ ವೈದ್ಯಕೀಯ ತಂಡ ಮತ್ತು ಡಾ.ಮುರುಗೇಶನ್ ಮನೋಹರನ್ ಅವರ ಅಚಲ ಬೆಂಬಲ ಮತ್ತು ಕಾಳಜಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಪ್ರಯಾಣದಲ್ಲಿ ನನ್ನ ತಂದೆ ತೋರಿದ ಸ್ಥೈರ್ಯ ಮತ್ತು ಶಕ್ತಿಗೆ ಅವರೇ ಸಾಟಿ. ಈ ಸವಾಲುಗಳನ್ನು ಎದುರಿಸುವಲ್ಲಿ ಅವರು ತೋರಿದ ಮನೋಬಲ ನಮಗೂ ಆಶಾಭಾವ ಮೂಡಿಸಿ ನಮ್ಮೆಲ್ಲರಿಗೂ ಧೈರ್ಯ ಒದಗಿಸಿದೆ. ಇದರ ನಡುವೆ, ಎಲ್ಲಾ ಅಭಿಮಾನಿ ದೇವರುಗಳಿಗೂ, ಕುಟುಂಬ ಸದಸ್ಯರಿಗೂ, ಸ್ನೇಹಿತರಿಗೂ ಮತ್ತು ಮಾಧ್ಯಮ ಸದಸ್ಯರಿಗೂ ನಾವು ನಮ್ಮ ತುಂಬು ಹೃದಯದ ಕೃತಜ್ಞತೆ ವ್ಯಕ್ತಪಡಿಸಲು ಬಯಸುತ್ತೇವೆ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದ ನಮ್ಮ ಶಕ್ತಿಯ ಮೂಲ. ನೀವೆಲ್ಲರೂ ತೋರಿದ ಕಾಳಜಿ ನಮಗೆ ಮುನ್ನಡೆಯುವ ಬಲ ತುಂಬಿದ್ದು, ಅದಕ್ಕೆ ನಾವೆಂದಿಗೂ ಆಭಾರಿ. ತಂದೆಯ ಚೇತರಿಕೆಯ ಕುರಿತು ಬರುವ ದಿನಗಳಲ್ಲಿ ತಿಳಿಸುತ್ತೇವೆ. ಈ ಪಯಣದಲ್ಲಿ ನಾವು ಮುಂದಿನ ಹೆಜ್ಜೆ ಇಡುತ್ತಿರಲು, ನಿಮ್ಮ ಪ್ರಾರ್ಥನೆಯ ಮೂಲಕ ನಮ್ಮನ್ನು ಆಶೀರ್ವದಿಸಿ ಎಂದು ಕೇಳಿಕೊಳ್ಳುತ್ತೇವೆ, ಧನ್ಯವಾದಗಳು" - ನಿವೇದಿತಾ ಶಿವರಾಜ್‌ಕುಮಾರ್.
ಇದಕ್ಕೂ ಮುನ್ನ ಡಾ.ಮುರುಗೇಶ ಮನೋಹರನ್, ಗೀತಾ ಶಿವರಾಜ್‌ಕುಮಾರ್ ಹಾಗೂ ಮಧು ಬಂಗಾರಪ್ಪ ಮೂವರನ್ನೊಳಗೊಂಡ ವಿಡಿಯೋ ಶೇರ್ ಆಗಿತ್ತು. ಇದರಲ್ಲಿ ನಟನ ಶಸ್ತ್ರಚಿಕಿತ್ಸೆ ಸುಗಮವಾಗಿ ನಡೆದಿದೆ, ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸಂದೇಶ ಹಂಚಿಕೊಳ್ಳಲಾಗಿತ್ತು. ಸರ್ಜರಿಗೂ ಮುನ್ನ ಕರ್ನಾಟಕದ ಹಲವೆಡೆ ಅಭಿಮಾನಿಗಳಿಂದ ಉರುಳು ಸೇವೆ, ಕೇಶ ಮುಂಡನೆ ಹಾಗೂ ಮಹಾ ಮೃತ್ಯುಂಜಯ ಹೋಮ ಸೇರಿದಂತೆ ವಿಶೇಷ ಪೂಜೆಗಳು ಜರುಗಿದ್ದವು.
ಇದನ್ನೂ ಓದಿ: ಶಿವರಾಜ್‌ಕುಮಾರ್ ಅಭಿನಯದ 'ಭೈರತಿ ರಣಗಲ್' ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್
ವಿಡಿಯೋ ಸಂದೇಶದಲ್ಲಿ, ''ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಗತ್ಯ ಚಿಕಿತ್ಸೆಗಳನ್ನು ಮುಂದುವರಿಸಲಾಗಿದೆ. ಪರಿಣಿತ ವೈದ್ಯರ ತಂಡದಿಂದ ಆರೈಕೆ ಉತ್ತಮವಾಗಿ ನಡೆಯುತ್ತಿದೆ. ಅಭಿಮಾನಿಗಳು, ಸಹೋದ್ಯೋಗಿಗಳು, ಮಾಧ್ಯಮಗಳ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ನಮ್ಮ ಧನ್ಯವಾದಗಳು. ಇದು ಇಡೀ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ. ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು'' ತಿಳಿಸಲಾಗಿದೆ.
ಶಿವರಾಜ್‌ಕುಮಾರ್ ಮುಖ್ಯಭೂಮಿಕೆಯ ಭೈರತಿ ರಣಗಲ್ ಚಿತ್ರ ಇಂದು ಓಟಿಟಿಗೆ ಎಂಟ್ರಿ ಕೊಟ್ಟಿದೆ. ನವೆಂಬರ್ 15, 2024ರಂದು ಚಿತ್ರಮಂದಿರ ಪ್ರವೇಶಿಸಿದ ಸಿನಿಮಾವೀಗ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. ಥಿಯೇಟರ್ನಲ್ಲಿ ಯಶಸ್ವಿಯಾಗಿರುವ ಸಿನಿಮಾವೀಗ ಓಟಿಟಿಯಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರನ್ನು ಆಕರ್ಷಿಸುವ ನಿರೀಕ್ಷೆಯಿದೆ.