ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಘಟನೆಯ ಕುರಿತು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮುನಿರತ್ನ ನೀಡಿರುವ ದೂರಿನ ಮೇರೆಗೆ ಆರೋಪಿತರ ವಿರುದ್ಧ ಹತ್ಯೆ ಮಾಡುವ ಉದ್ದೇಶ ಹಾಗೂ ಒಳಸಂಚು ರೂಪಿಸಿ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರತಿದೂರು ದಾಖಲು: ತಮ್ಮನ್ನು ಹತ್ಯೆ ಮಾಡುವ ಸಂಚಿನ ಮುಂದುವರೆದ ಭಾಗವಾಗಿ ಮೊಟ್ಟೆ ಎಸೆಯಲಾಗಿದೆ ಎಂದು ಆರೋಪಿಸಿ ಶಾಸಕ ಮುನಿರತ್ನ ದೂರು ನೀಡಿದ್ದರು. ಪ್ರತಿಯಾಗಿ ಮೊಟ್ಟೆ ಎಸೆದವ ಎಂದು ಆರೋಪ ಎದುರಿಸುತ್ತಿರುವವರೂ ಸಹ ಪ್ರತಿದೂರು ನೀಡಿದ್ದಾರೆ. ಮುನಿರತ್ನ ಅವರ ಬೆಂಬಲಿಗರೇ ಗುಂಪು ಕಟ್ಟಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ನಗರದ ಕಂಠೀರವ ಸ್ಟುಡಿಯೋ ಬಳಿ ಬುಧವಾರ ಶಾಸಕ ಮುನಿರತ್ನ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮ ಆಯೋಜಿಸಿದ್ದರು. ಅದೇ ಸಂದರ್ಭದಲ್ಲಿ ಕಿಡಿಗೇಡಿಗಳು ಬಿಜೆಪಿ ಶಾಸಕ ಮುನಿರತ್ನ ಅವರ ತಲೆಗೆ ಮೊಟ್ಟೆ ಎಸೆದು ದಾಂಧಲೆ ನಡೆಸಿದ್ದರು. ವಿಶ್ವನಾಥ, ಕೃಷ್ಣಮೂರ್ತಿ ಮತ್ತು ಚಂದ್ರು ಎಂಬ ಮೂವರು ಸೇರಿ ಮೊಟ್ಟೆ ಎಸೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಸ್ಥಳದಲ್ಲಿಯೇ ಮೂವರನ್ನೂ ನಂದಿನಿ ಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ: ಮೂವರು ಕಿಡಿಗೇಡಿಗಳ ಬಂಧನ