'ಕಾಟೇರ' ಚಿತ್ರದ ನಾಯಕಿ ನಟಿ ಆರಾಧನಾ ಜೊತೆಗೆ 'ಗೌರಿ' ಚಿತ್ರದ ನಾಯಕ ನಟ ಸಮರ್ಜಿತ್ ಲಂಕೇಶ್ ರ‍್ಯಾಂಪ್ ವಾಕ್ ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ JW Marriott ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಫ್ಯಾಶನ್ ಶೋನಲ್ಲಿ ಸಮರ್ಜಿತ್ ಹಾಗೂ ಆರಾಧನಾ Show Stopper ಆಗಿ ಕಾಣಿಸಿಕೊಂಡರು. ಅಲ್ಲದೇ ಈ ಜೋಡಿ ರ‍್ಯಾಂಪ್ ವಾಕ್ ಮಾಡುವ ಮೂಲಕ ನೆರೆದಿದ್ದ ಸಾವಿರಾರು ಮಂದಿ ಪ್ರೇಕ್ಷಕರ ಗಮನ ಕೂಡ ಸೆಳೆಯಿತು. ರ‍್ಯಾಂಪ್ ವಾಕ್ ಮಾಡುವ ದೃಶ್ಯ ಜಾಲತಾಣದಲ್ಲಿ ಜಾಗ ಪಡೆದಿದೆ.
ಸದ್ಯ ಟೀಸರ್ನಿಂದಲೇ ಸಖತ್ ಸೌಂಡ್ ಮಾಡುತ್ತಿರುವ 'ಗೌರಿ' ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದೆ. ಈ ಚಿತ್ರಕ್ಕೆ ಎ.ಜೆ.ಶೆಟ್ಟಿ ಹಾಗೂ ಕೆ.ಕೆ ಅವರ ಛಾಯಾಗ್ರಹಣ ಇದ್ದು ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ಈ ನಾಲ್ವರು ಸಂಗೀತ ನಿರ್ದೇಶಕರು. ಮ್ಯಾಥ್ಯೂಸ್ ಮನು ರೀರೆಕಾರ್ಡಿಂಗ್ ಮಾಡಿದ್ದಾರೆ.
ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ, ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ, ಸಮರ್ಜಿತ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ.
ಸಮರ್ಜಿತ್ ಲಂಕೇಶ್ ಜೊತೆ ಸಾನ್ಯಾ ಅಯ್ಯರ್ ಜೋಡಿಯಾಗಿದ್ದಾರೆ. ಲಾಫಿಂಗ್ ಬುದ್ಧ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ ಹಾಗೂ ನಿರ್ದೇಶನ ಮಾಡಿದ್ದಾರೆ. ಟೀಸರ್ ಹಾಗೂ ಹಾಡುಗಳಿಂದ ಕ್ರೇಜ್ ಹುಟ್ಟಿಸಿರುವ ಗೌರಿ ಚಿತ್ರದ ಸದ್ಯದಲ್ಲೇ ತೆರೆಗೆ ಬರಲಿದೆ.