ಮುಂಬೈ (ಮಹಾರಾಷ್ಟ್ರ):ಜನವರಿ 16ರ ಮುಂಜಾನೆ ಮುಂಬೈನ ಬಾಂದ್ರಾ ಪ್ರದೇಶದ ಸತ್ಗುರು ಶರಣ್ ಕಟ್ಟಡದಲ್ಲಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿ, ಸೈಫ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದಾನೆ. ನಟನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಬೆನ್ನೆಲುಬಿನಿಂದ 2.5 ಇಂಚು ಉದ್ದದ ಬ್ಲೇಡ್ ಅನ್ನು ಹೊರ ತೆಗೆಯಲಾಗಿದೆ. ಈ ಘಟನೆ ಬಾಲಿವುಡ್ ಮಾತ್ರವಲ್ಲದೇ ಭಾರತವನ್ನೇ ಬೆಚ್ಚಿಬೀಳಿಸಿದೆ. ಸೆಲೆಬ್ರಿಟಿಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಘಟನೆ ನಡೆದು 30 ಗಂಟೆಗಳ ನಂತರವೂ, ಸೈಫ್ ಮತ್ತು ಅವರ ಮನೆಕೆಲಸದಾಕೆಯನ್ನು ಗಾಯಗೊಳಿಸಿರೋ ದಾಳಿಕೋರ ಪರಾರಿಯಾಗಿದ್ದಾನೆ. ಪತ್ತೆಗೆ ತನಿಖೆ ಮುಂದುವರಿದಿದೆ.
ಸೈಫ್ ಅಲಿ ಖಾನ್ ಹೆಲ್ತ್ ಅಪ್ಡೇಟ್ಸ್:ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ನಟನನ್ನು ಐಸಿಯುನಿಂದ ಹೊರಗೆ ಸ್ಥಳಾಂತರಿಸಲಾಗಿದೆ ಎಂದು ಲೀಲಾವತಿ ಆಸ್ಪತ್ರೆಯ ಡಾ.ನಿತಿನ್ ಡಾಂಗೆ ಇಂದು ದೃಢಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯರ ತಂಡ, ಸೈಫ್ ಅವರು ಅಪಾಯದಿಂದ ಪಾರಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಖಚಿತಪಡಿಸಿದರು.
"ಅವರು ಸಿಂಹದಂತೆ ಒಳಗೆ ಬಂದರು": ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಲೀಲಾವತಿ ಆಸ್ಪತ್ರೆಯ ಡಾ.ನೀರಜ್ ಉತ್ತಮಣಿ, ಸೈಫ್ ಅಲಿ ಖಾನ್ ಆಸ್ಪತ್ರೆಗೆ ಆಗಮಿಸಿದ ಬಗ್ಗೆ ವಿವರಗಳನ್ನು ಹಂಚಿಕೊಂಡರು. ಗಾಯಗೊಂಡ ಒಂದು ಗಂಟೆಯೊಳಗೆ ಅವರನ್ನು ಭೇಟಿಯಾದ ಮೊದಲ ವೈದ್ಯರು ತಾವೆಂಬುದನ್ನು ಈ ಸಂದರ್ಭದಲ್ಲಿ ವಿವರಿಸಿದರು. "ಅವರ ಮೈಯೆಲ್ಲಾ ರಕ್ತವಾಗಿತ್ತು. ಆದರೆ, ಅವರು ತಮ್ಮ ಚಿಕ್ಕ ಮಗುವಿನೊಂದಿಗೆ ಸಿಂಹದಂತೆ ಒಳಗೆ ಬಂದರು. ಅವರು ರಿಯಲ್ ಹೀರೋ. ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಪ್ಯಾರಾಮೀಟರ್ಸ್ ಸುಧಾರಿಸಿವೆ. ಅವರನ್ನು ಐಸಿಯುನಿಂದ ವಿಶೇಷ ಕೋಣೆಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಅವರು ವಿಶ್ರಾಂತಿ ಪಡೆಯಬೇಕು" ಎಂದು ತಿಳಿಸಿದರು.
20 ಪೊಲೀಸ್ ತಂಡಗಳ ರಚನೆ: ಸೈಫ್ ಅಲಿ ಖಾನ್ಗೆ ಹಲವು ಬಾರಿ ಇರಿದು ಪರಾರಿಯಾಗಿರುವ ದುಷ್ಕರ್ಮಿಯನ್ನು ಹಿಡಿಯಲು ಮುಂಬೈ ಪೊಲೀಸರು 20 ತಂಡಗಳನ್ನು ರಚಿಸಿದ್ದಾರೆ.
ಓರ್ವ ವಶಕ್ಕೆ? ಬಾಲಿವುಡ್ ನಟನ ಮೇಲಿನ ದಾಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದು (ಶುಕ್ರವಾರ) ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಶಂಕಿತನನ್ನು ಬಾಂದ್ರಾ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ವರದಿಗಳಾಗಿತ್ತು. ಸಿಸಿಟಿವಿ ದೃಶ್ಯ ಕೂಡಾ ಹೊರಬಿದ್ದಿದೆ. ಆದ್ರೆ ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ, ಅರೆಸ್ಟ್ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಾಂದ್ರಾ ರೈಲು ನಿಲ್ದಾಣದ ಬಳಿ ಕೊನೆಯದಾಗಿ ಕಾಣಿಸಿಕೊಂಡ ಆರೋಪಿ:ದಾಳಿಯಲ್ಲಿ ಭಾಗಿಯಾಗಿರುವ ಆರೋಪಿ ಬಾಂದ್ರಾ ರೈಲು ನಿಲ್ದಾಣದ ಬಳಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು, ಆತನನ್ನು ಬಂಧಿಸಲು ಶೋಧ ಕಾರ್ಯ ಮುಂದುವರೆದಿದೆ ಎಂದು ಮುಂಬೈ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಘಟನೆ ನಂತರ, ಶಂಕಿತ ಬೆಳಗ್ಗೆ ಮೊದಲ ಲೋಕಲ್ ಟ್ರೇನ್ ಹಿಡಿದು ವಸಾಯಿ ವಿರಾರ್ ಕಡೆಗೆ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಎಲ್ಲೆಲ್ಲಿ ಪೊಲೀಸ್ ಶೋಧ ಕಾರ್ಯ? ಮಾಧ್ಯಮದೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರ ಪ್ರಕಾರ, ಮುಂಬೈ ಪೊಲೀಸ್ ತಂಡಗಳು ವಸಾಯಿ, ನಲಸೋಪರ ಮತ್ತು ವಿರಾರ್ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿವೆ.
ಟೆಕ್ನಿಕಲ್ ಡಾಟಾ: ಅಪರಾಧ ವಿಭಾಗ ಮತ್ತು ಸ್ಥಳೀಯ ಪೊಲೀಸರು "ಕಳ್ಳತನಕ್ಕೆ ಯತ್ನಿಸಿದ" ಸಮಯದಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಸಕ್ರಿಯಗೊಂಡಿದ್ದ ಮೊಬೈಲ್ ಫೋನ್‌ಗಳ ಡಾಟಾ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದಾರೆ.