ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ನಡೆದಿರೋ ಘಟನೆ ಬಗ್ಗೆ ಬಾಲಿವುಡ್ ಬಹುಬೇಡಿಕೆ ನಟ ಶಾಹಿದ್ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಶಾಹಿದ್ ತಮ್ಮ ಮುಂಬರುವ 'ದೇವ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯನ್ನು 'ಶಾಕಿಂಗ್' ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ, ಸೈಫ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಸೈಫ್ಗೆ ಚಾಕುವಿನಿಂದ ಇರಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಬ್ ವಿ ಮೆಟ್ ನಟ, "ನಾವೆಲ್ಲರೂ ಚಿಂತಿತರಾಗಿದ್ದೇವೆ. ಸೈಫ್ ಅವರ ಆರೋಗ್ಯ ಸುಧಾರಿಸಲಿ ಎಂದು ನಾವು ಆಶಿಸುತ್ತೇವೆ. ನಡೆದಿರೋ ಘಟನೆ ನಿಜಕ್ಕೂ ಶಾಕಿಂಗ್. ಮುಂಬೈನಲ್ಲಿ ಇಂಥ ಒಂದು ಘಟನೆ ನಡೆಯಬಹುದು ಎಂಬುದನ್ನು ಅರಗಿಸಿಕೊಳ್ಳೋದು ತುಂಬಾನೇ ಕಷ್ಟ. ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂಬುದು ಖಚಿತ. ಸಾಮಾನ್ಯವಾಗಿ, ಮುಂಬೈನಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ. ಮುಂಬೈ ಅತ್ಯಂತ ಸುರಕ್ಷಿತ ಸ್ಥಳ. ನಿಮ್ಮ ಕುಟುಂಬದ ಸದಸ್ಯರು ಬೆಳಗಿನ ಜಾವ 2 ಅಥವಾ 3 ಗಂಟೆಗೆ ಹೊರಗೆ ಇದ್ದರೂ ಅವರು ಸುರಕ್ಷಿತವಾಗಿರುತ್ತಾರೆ ಎಂಬುದನ್ನು ಬಹಳ ಹೆಮ್ಮೆಯಿಂದ ಹೇಳುತ್ತೇನೆ" ಎಂದು ತಿಳಿಸಿದರು.
ಐಸಿಯುನಿಂದ ವಿಶೇಷ ವಾರ್ಡ್‌ಗೆ ಶಿಫ್ಟ್: ಸೈಫ್ ಅಲಿ ಖಾನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇಂದು ಅವರನ್ನು ಐಸಿಯುನಿಂದ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಅವರ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ: ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಅಪಾಯದಿಂದ ಪಾರು: ಬುಧವಾರ ತಡ ರಾತ್ರಿ (ಗುರುವಾರ ಮುಂಜಾನೆ) ನಟನ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಅವರಿಗೆ ಆರು ಬಾರಿ ಇರಿದು ಪರಾರಿಯಾಗಿದ್ದಾನೆ. ನಂತರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ನಟನ ಬೆನ್ನಿನಿಂದ 2.5 ಇಂಚಿನ ಬ್ಲೇಡ್ ಹೊರತೆಗೆದಿದ್ದಾರೆ. ಬೆನ್ನುಮೂಳೆಯ ಬಳಿ ಎರಡು ಗಂಭೀರ ಗಾಯಗಳಿದ್ದರೂ ನಟ ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಅಪಾಯದಿಂದ ಪಾರಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಆ ಅಪರಿಚಿತ ಕಳ್ಳತನಕ್ಕೆಂದು ನಟನ ಮನೆಗೆ ನುಗ್ಗಿದ್ದ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಪ್ರಕರಣದಲ್ಲಿ ಯಾರನ್ನೂ ವಶಕ್ಕೆ ಪಡೆಯಲಾಗಿಲ್ಲ: ಮುಂಬೈ ಪೊಲೀಸರು ಸ್ಪಷ್ಟನೆ
ಶಾಹಿದ್ ಕಪೂರ್ ಸಿನಿಮಾ ಬಗ್ಗೆ ಗಮನಿಸೋದಾದರೆ, ನಟ ತಮ್ಮ ಬಹುನಿರೀಕ್ಷಿತ ಚಿತ್ರ ದೇವ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಚಿತ್ರ ಇದೇ ಜನವರಿ 31 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಶಾಹಿದ್ ಜೊತೆಗೆ ಚಿತ್ರದಲ್ಲಿ ಪೂಜಾ ಹೆಗ್ಡೆ, ಪವೈಲ್ ಗುಲಾಟಿ, ಪ್ರವೇಶ್ ರಾಣಾ ಮತ್ತು ಕುಬ್ರಾ ಸೇಠ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೋಶನ್ ಆಂಡ್ರ್ಯೂಸ್ ಆ್ಯಕ್ಷನ್ ಕಟ್ ಹೇಳಿರೋ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಿಸಿದ್ದಾರೆ.