ಮುಂಬೈ (ಮಹಾರಾಷ್ಟ್ರ): ರಕ್ತಸಿಕ್ತಗೊಂಡಿದ್ದ ವ್ಯಕ್ತಿಯನ್ನು ಲೀಲಾವತಿ ಆಸ್ಪತ್ರೆಗೆ ಕರೆದುಕೊಂಡು ಹೋದ ಆಟೋ ಚಾಲಕನಿಗೆ ತಮ್ಮ ಪ್ರಯಾಣಿಕ ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಎಂಬುದು ಮೊದಲು ತಿಳಿದಿರಲಿಲ್ಲ. ಈ ವಿಷಯವನ್ನು ಸ್ವತಃ ಆಟೋ ರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ ಬಹಿರಂಗಪಡಿಸಿದ್ದಾರೆ.
"ನಾವು ಆಸ್ಪತ್ರೆಗೆ ತಲುಪಿದಾಗ ಅವರು ಸ್ಟ್ರೆಚರ್ ತರಲು ಗಾರ್ಡ್‌ಗೆ ತಿಳಿಸಿದರು, ಜೊತೆಗೆ ತಾನು ಸೈಫ್ ಅಲಿ ಖಾನ್ ಎಂದು ಹೇಳಿಕೊಂಡರು" ಎಂದು ಆಟೋ ಚಾಲಕ ಮುಂಬೈನಲ್ಲಿ ಇಂದು ಸುದ್ದಿಗಾರರಿಗೆ ತಿಳಿಸಿದರು.
''ನಟನ ನಿವಾಸ ಇರುವ ಅಪಾರ್ಟ್ಮೆಂಟ್ ಬಳಿ ಹಾದು ಹೋಗುವಾಗ, ಒಬ್ಬ ಮಹಿಳೆ ಮತ್ತು ಇತರ ಕೆಲವರು ರಿಕ್ಷಾ ನಿಲ್ಲಿಸುವಂತೆ ಕೇಳಿಕೊಂಡರು. ನಂತರ ರಕ್ತಸಿಕ್ತಗೊಂಡಿದ್ದ (ಬಿಳಿ ಕುರ್ತಾ) ವ್ಯಕ್ತಿ ಆಟೋ ಹತ್ತಿದರು. ಅವರ ಕುತ್ತಿಗೆ ಮತ್ತು ಬೆನ್ನಿಗೆ ಗಾಯಗಳಾಗಿರುವುದನ್ನು ನಾನು ಗಮನಿಸಿದೆ. ಆದರೆ ಕೈಗೆ ಗಾಯವಾಗಿರುವುದನ್ನು ಗಮನಿಸಲಿಲ್ಲ" - ಭಜನ್ ಸಿಂಗ್ ರಾಣಾ.
ಮಗ ತೈಮೂರ್ ನಟನ ಜೊತೆ ಇದ್ದನೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಅವರು (ಸೈಫ್) ಆಟೋ ಹತ್ತಿದರು. ಏಳೆಂಟು ವರ್ಷದ ಬಾಲಕನೂ ರಿಕ್ಷಾ ಹತ್ತಿದ" ಎಂದು ತಿಳಿಸಿದರು. ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಹೋಗುವ ಪ್ಲ್ಯಾನ್ ಇತ್ತು. ನಂತರ ಸೈಫ್ ಬಾಂದ್ರಾದ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲು ಅವರು ಕೇಳಿಕೊಂಡರು ಎಂದು ತಿಳಿಸಿದರು.
ನಾವು ಆಸ್ಪತ್ರೆ ತಲುಪಿದಾಗ, ಅವರು ಗೇಟ್ ಬಳಿ ಇದ್ದ ಗಾರ್ಡ್ಗಳನ್ನು ಕರೆದು, ದಯವಿಟ್ಟು ಸ್ಟ್ರೆಚರ್ ತನ್ನಿ. ನಾನು ಸೈಫ್ ಅಲಿ ಖಾನ್ ಎಂದು ಹೇಳಿಕೊಂಡಿದ್ದನ್ನು ಈ ವೇಳೆ ಆಟೋ ಚಾಲಕ ತಿಳಿಸಿದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಟೋ ಆಸ್ಪತ್ರೆಗೆ ತಲುಪಿತು. ಅವರ ಮನೆಯಿಂದ ಏಳೆಂಟು ನಿಮಿಷಗಳಲ್ಲಿ ಆಸ್ಪತ್ರೆ ತಲುಪಿದೆವು. ನಂತರ ಅವರಿಂದ ಹಣ ತೆಗೆದುಕೊಳ್ಳಲಿಲ್ಲ ಎಂದು ಚಾಲಕ ತಿಳಿಸಿದ್ದಾರೆ.
ಇದನ್ನೂ ಓದಿ: 100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್
ನಟ ತಮ್ಮ ಮಗನೊಂದಿಗೆ ಮಾತನಾಡುತ್ತಿದ್ದರು ಎಂದು ಭಜನ್ ಸಿಂಗ್ ರಾಣಾ ತಿಳಿಸಿದರು. ಜೊತೆಗೆ, ಆಟೋದಲ್ಲಿ ಮತ್ತೊಬ್ಬ ಯುವಕ ಕೂಡಾ ಇದ್ದ ಎಂದು ತಿಳಿಸಿದ್ದಾರೆ. ಅವರು ಬಹುಶಃ ಸೈಫ್ ಅವರ 23 ವರ್ಷದ ಮಗ ಇಬ್ರಾಹಿಂ ಅಲಿ ಖಾನ್ ಇರಬಹುದು.
ಇದನ್ನೂ ಓದಿ: ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ: ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ದರೋಡೆ ಪ್ಲ್ಯಾನ್ನೊಂದಿಗೆ ಅಪರಿಚಿತ ವ್ಯಕ್ತಿ ನಟನ ಮನೆ ಒಳನುಗ್ಗಿದ್ದಾನೆ. ಮೊದಲು ಮನೆ ಕೆಲಸದಾಕೆ ಎದುರಾಗಿದ್ದಾರೆ. ಕಿರುಚಿಕೊಂಡ ಬೆನ್ನಲ್ಲೇ ಕರೀನಾ ಮತ್ತು ಸೈಫ್ ತಮ್ಮ ರೂಮ್ನಿಂದ ಹೊರಬಂದಿದ್ದಾರೆ. ಪರಿಸ್ಥಿತಿ ಹಿಂಸಾತ್ಮಕ ರೂಪಕ್ಕೆ ತಿರುಗಿ, ಆ ವ್ಯಕ್ತಿ ಸೈಫ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆತ ಒಂದು ಕೋಟಿಗೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.