ದುನಿಯಾ ವಿಜಯ್, ಕನ್ನಡ ಚಿತ್ರರಂಗದ ಬಹುಬೇಡಿಕೆ ನಟರಲ್ಲೊಬ್ಬರು . ಭೀಮ ಸಿನಿಮಾ ಮೂಲಕ ಸಖತ್ ಸದ್ದು ಮಾಡಿದ್ದ ನಟ ಸದ್ಯ ತಮ್ಮ ಮುಂದಿನ ಚಿತ್ರಗಳ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಇದೇ ಜನವರಿ 20ಕ್ಕೆ ನಟನ ಹುಟ್ಟುಹಬ್ಬ. ಮೆಚ್ಚಿನ ನಟನ ಜನ್ಮದಿನಾಚರಣೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಜ್ಜಾಗಿದ್ದಾರೆ. ಆದರೆ, ಈ ಬಗ್ಗೆ ವಿಜಯ್ ಪೋಸ್ಟ್ ಒಂದನ್ನು ಶೇರ್ ಮಾಡಿ, ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ದುನಿಯಾ ವಿಜಯ್ ಪೋಸ್ಟ್ನಲ್ಲೇನಿದೆ? ಸ್ಯಾಂಡಲ್ವುಡ್ನ ಪಾಪ್ಯುಲರ್ ಸ್ಟಾರ್ ತಮ್ಮ ಅಧಿಕೃತ ಸೋಷಿಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಫೋಟೋ ಶೇರ್ ಮಾಡಿದ್ದಾರೆ. ಜೊತೆಗೆ, ''ನನ್ನ ಪ್ರೀತಿಯ ಅಭಿಮಾನಿಗಳೇ... ಪ್ರತೀ ವರ್ಷವೂ ನನ್ನ ಹುಟ್ಟು ಹಬ್ಬವನ್ನು ನಿಮ್ಮ ಮನೆಯ, ಊರಿನ ಹಬ್ಬವನ್ನಾಗಿ ನೀವುಗಳು ಅಂದರೆ ನನ್ನ ಅಭಿಮಾನಿಗಳು ಆಚರಣೆ ಮಾಡ್ತಾ ಇದ್ರಿ. ಈ ಬಾರಿಯೂ ನಿಮ್ಮ ಜತೆ ನಾನು ಹುಟ್ಟು ಹಬ್ಬವನ್ನು ಆಚರಿಸಬೇಕು ಎಂಬ ಆಸೆ ಇತ್ತು. ಆದರೆ, ಕೆಲಸ ಎಂಬ ಜವಾಬ್ದಾರಿ ನನ್ನ ಬೆನ್ನೇರಿದೆ. ತಾವೆಲ್ಲರೂ ನಾನು ಮಾಡುವ ಕೆಲಸಕ್ಕೆ ನನ್ನ ಜತೆ ನಿಂತು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದೀರಿ. ಪ್ರತಿ ಬಾರಿಯಂತೆ ಈ ಬಾರಿ ನಾನು ಹುಟ್ಟುಹಬ್ಬದ ದಿನ ನನ್ನ ತಾಯಿ, ತಂದೆ ಸಮಾಧಿ ಬಳಿ ಸಿಗುವುದಿಲ್ಲ. ಅಂದು ಜಡೇಶ್ ಕೆ ಹಂಪಿ ನಿರ್ದೇಶನ ಮಾಡುತ್ತಿರುವ VK29 ಚಿತ್ರೀಕರಣದಲ್ಲಿರುತ್ತೇನೆ. ನಿಮ್ಮ ಪ್ರೀತಿ ಅಭಿಮಾನದ ನಿರೀಕ್ಷೆಯಂತೆ ಅಂದೇ VK 29 ಚಿತ್ರದ ಫಸ್ಟ್ ಲುಕ್ ನಿಮಗಾಗಿ ಬಿಡುಗಡೆ ಮಾಡ್ತಿದ್ದೇವೆ. ವಿಶೇಷ ಮನವಿ:ಶನಿವಾರ ಭಾನುವಾರ ನಾನೂ ಊರಲ್ಲಿ ಇರುವುದಿಲ್ಲ. ದಯವಿಟ್ಟು ಯಾರೂ ಕೂಡ ಮನೆ ಬಳಿ ಬಂದು ಕಾಯಬೇಡಿ. ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ.