ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೋಟ್ಯಂತರ ಕಟ್ಟಾ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ನೋಡಲು, ಮಾತನಾಡಿಸಲು, ಅವರೊಂದಿಗೆ ಒಂದೆರೆಡು ನಿಮಿಷವಾದರೂ ಕಳೆಯಲು, ಫೋಟೋ - ವಿಡಿಯೋ ಕ್ಲಿಕ್ಕಿಸಿಕೊಳ್ಳಲು ಇಚ್ಛಿಸುತ್ತಾರೆ. ನಟನನ್ನು ನೋಡಲು, ಅವರೊಂದಿಗೆ ಕೆಲಸ ಮಾಡೋ ವಿಶೇಷ ಅವಕಾಶವನ್ನು ಯಾರೂ ಕಳೆದುಕೊಳ್ಳುವುದಿಲ್ಲ. ಇದನ್ನೇ ದುರುಪಯೋಗಪಡಿಸಿಕೊಳ್ಳೋ ಗುಂಪುಗಳು ಸಹ ಇವೆ.
ಇತ್ತೀಚೆಗೆ ಶಾರುಖ್ ಖಾನ್ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ 'ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್'ನಲ್ಲಿ ಕೆಲಸ ಇದೆ ಎಂಬ ಆಫರ್ ಲೆಟರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆ ನೋಟಿಸ್ ಜಾರಿ ಮಾಡಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.
ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ನೋಟಿಸ್ ಪೋಸ್ಟ್ ಮಾಡೋ ಮೂಲಕ ಜನರಿಗೆ ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದೆ. 'ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಹೆಸರಲ್ಲಿ ಫೇಕ್ ಆಫರ್ ಲೆಟರ್ಗಳು ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ, ವಿಶೇಷವಾಗಿ ವಾಟ್ಸ್ಆ್ಯಪ್ನಲ್ಲಿ ವೈರಲ್ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಯಾವುದೇ ನೇಮಕಾತಿ ನೀತಿ ಅಥವಾ ಯಾವುದೇ ಉದ್ಯೋಗ ಅವಕಾಶಗಳ ಬಗ್ಗೆ ವಾಟ್ಸ್ಆ್ಯಪ್ ಅಥವಾ ಇನ್ಯಾವುದೇ ಇತರ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡುವುದಿಲ್ಲ ಎಂಬುದನ್ನು ನಾವು ಹೇಳಲು ಬಯಸುತ್ತೇವೆ. ಆಫರ್ಗಳನ್ನು ನಮ್ಮ ಅಧಿಕೃತ ಚಾನೆಲ್‌ಗಳ ಮೂಲಕ ಮಾತ್ರ ಒದಗಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.