ನವದೆಹಲಿ: ಆಹಾರ, ಇಂಧನ ಮತ್ತು ವಿದ್ಯುತ್ನಂಥ ಅಗತ್ಯ ವಸ್ತುಗಳ ಬೆಲೆಗಳು ಇಳಿಕೆಯಾಗಿರುವುದರಿಂದ ಭಾರತದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಜನವರಿಯಲ್ಲಿ ಶೇಕಡಾ 0.27ಕ್ಕೆ ಇಳಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ. ಡಬ್ಲ್ಯುಪಿಐ ನವೆಂಬರ್ನಲ್ಲಿ ಶೇಕಡಾ 0.26 ಇದ್ದುದು ಡಿಸೆಂಬರ್‌ನಲ್ಲಿ ಶೇಕಡಾ 0.73ಕ್ಕೆ ಏರಿಕೆಯಾಗಿತ್ತು.
ರಾಸಾಯನಿಕ ಉತ್ಪನ್ನಗಳು, ವಿದ್ಯುತ್, ಜವಳಿ, ಮೂಲ ಲೋಹಗಳು, ಆಹಾರ ಉತ್ಪನ್ನಗಳು, ಕಾಗದ ಮತ್ತು ಕಾಗದದ ಉತ್ಪನ್ನಗಳಂಥ ಸರಕುಗಳ ಬೆಲೆಗಳಲ್ಲಿನ ಕುಸಿತದಿಂದಾಗಿ ಸಗಟು ಹಣದುಬ್ಬರವು ಕಳೆದ ವರ್ಷ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಇಳಿಕೆಯ ಮಟ್ಟದಲ್ಲಿತ್ತು. ಸಗಟು ಹಣದುಬ್ಬರವು ನವೆಂಬರ್ನಲ್ಲಿ ಏಳು ತಿಂಗಳಲ್ಲಿ ಮೊದಲ ಬಾರಿಗೆ ಏರಿಕೆಯ ಹಂತ ಪ್ರವೇಶಿಸಿತು.
ಭತ್ತ, ಧಾನ್ಯಗಳು, ಬೇಳೆಕಾಳು, ತರಕಾರಿಗಳು, ಈರುಳ್ಳಿ, ಹಣ್ಣುಗಳು ಮತ್ತು ಹಾಲಿನ ಬೆಲೆಗಳು ಇಳಿಕೆಯಾದ ಕಾರಣ ಆಹಾರ ಹಣದುಬ್ಬರವು ಜನವರಿಯಲ್ಲಿ ಶೇಕಡಾ 6.85ಕ್ಕೆ ಇಳಿದಿದೆ. ಡಿಸೆಂಬರ್‌ನಲ್ಲಿ ಇದು ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇಕಡಾ 9.38 ರಷ್ಟಿತ್ತು. ಆಹಾರೇತರ ವಸ್ತುಗಳ ಬೆಲೆಗಳು ಶೇಕಡಾ 6.56, ಇಂಧನ ಮತ್ತು ವಿದ್ಯುತ್ ಬೆಲೆಗಳು ಶೇಕಡಾ 0.51, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಬೆಲೆಗಳು ಶೇಕಡಾ 0.20ರಷ್ಟು ಇಳಿಕೆಯಾಗಿವೆ. ಉತ್ಪಾದಿತ ಸರಕುಗಳ ಬೆಲೆಗಳು ತಿಂಗಳಲ್ಲಿ ಶೇಕಡಾ 1.13ರಷ್ಟು ಕುಸಿದಿವೆ.