ವಾಷಿಂಗ್ಟನ್ ಡಿಸಿ ( ಅಮೆರಿಕ): ದಕ್ಷಿಣ ಏಷ್ಯಾದ ಬೆಳವಣಿಗೆಯ ದರ 2024 ರಲ್ಲಿ 6.0 ಪ್ರತಿಶತದಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ದಕ್ಷಿಣ ಏಷ್ಯಾದ ಈ ಪರಿ ಬೆಳವಣಿಗೆಯು ಭಾರತದ ಆರ್ಥಿಕತೆಯ ಅಭಿವೃದ್ಧಿಯಿಂದ ಪ್ರಭಾವಿತವಾಗಿದೆ ಎಂದು ವರ್ಲ್ಡ್ ಬ್ಯಾಂಕ್ ಹೇಳಿದೆ.
ಜಾಬ್ಸ್ ಫಾರ್ ರೆಸಿಲಿಯೆನ್ಸ್ ಪ್ರಕಾರ, ಮಂಗಳವಾರ ಬಿಡುಗಡೆಯಾದ ಇತ್ತೀಚಿನ ದಕ್ಷಿಣ ಏಷ್ಯಾ ಅಭಿವೃದ್ಧಿ ವರದಿಯಲ್ಲಿ, ಭಾರತದಲ್ಲಿ ಉತ್ಪಾದನಾ ಬೆಳವಣಿಗೆಯು 2023-24 ನೇ ಸಾಲಿನಲ್ಲಿ ಶೇ 7.5ಕ್ಕೆ ತಲುಪುವ ಮೊದಲು ಮಧ್ಯಮ ಅವಧಿಯಲ್ಲಿ ಶೇ 6.6ಕ್ಕೆ ಮರಳುವ ನಿರೀಕ್ಷೆಯಿದೆ. ಸೇವಾ ವಲಯ ಹಾಗೂ ಉದ್ಯಮಗಳಲ್ಲಿನ ಚಟುವಟಿಕೆಗಳು ದೃಢವಾಗಿ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.
ವಿಶ್ವ ಬ್ಯಾಂಕ್ ವರದಿಯ ಪ್ರಕಾರ ನಿರಂತರವಾದ ರಚನಾತ್ಮಕ ಸವಾಲುಗಳು ಆರ್ಥಿಕ ಬೆಳವಣಿಗೆಗಳನ್ನು ಕುಂಠಿತ ಮಾಡಬಹುದು. ಉದ್ಯೋಗಗಳನ್ನು ಸೃಷ್ಟಿಸುವ ಸವಾಲುಗಳು ರಾಷ್ಟ್ರಗಳ ಮುಂದಿದ್ದು, ಹವಾಮಾನ ವೈಪರೀತ್ಯವೂ ಬಲವಾದ ಹೊಡೆತ ನೀಡುವ ಸಾಧ್ಯತೆಗಳೂ ಇವೆ ಎಂದು ವಿಶ್ವಬ್ಯಾಂಕ್ ಎಚ್ಚರಿಕೆ ಕೂಡಾ ನೀಡಿದೆ. "ದಕ್ಷಿಣ ಏಷ್ಯಾದ ಬೆಳವಣಿಗೆಯ ನಿರೀಕ್ಷೆಗಳು ಅಲ್ಪಾವಧಿಯಲ್ಲಿ ಉಜ್ವಲವಾಗಿರುತ್ತವೆ, ಆದರೆ, ದುರ್ಬಲವಾದ ಹಣಕಾಸಿನ ಸ್ಥಿತಿಗಳು ಮತ್ತು ಹೆಚ್ಚುತ್ತಿರುವ ಹವಾಮಾನ ವೈಪರೀತ್ಯಗಳು ದಿಗಂತದಲ್ಲಿ ಕಪ್ಪು ಮೋಡಗಳಿದ್ದಂತೆ ಎಂದು ವಿಶ್ವ ಬ್ಯಾಂಕ್ನ ದಕ್ಷಿಣ ಏಷ್ಯಾದ ಉಪಾಧ್ಯಕ್ಷ ಮಾರ್ಟಿನ್ ರೈಸರ್ ಹೇಳಿದ್ದಾರೆ