ಮುಂಬೈ: ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಮಂಗಳವಾರದಂದು ನಷ್ಟದೊಂದಿಗೆ ಕೊನೆಗೊಂಡಿವೆ.
30 ಷೇರುಗಳ ಸೆನ್ಸೆಕ್ಸ್ 1,018.20 ಪಾಯಿಂಟ್ ಅಥವಾ ಶೇಕಡಾ 1.32 ರಷ್ಟು ಕುಸಿದು 76,293.60 ರಲ್ಲಿ ಕೊನೆಗೊಂಡಿದೆ. ಸೂಚ್ಯಂಕವು ಮಂಗಳವಾರ 77,387.28 ರಿಂದ 76,030.59 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಇಂದಿನ ಮುಕ್ತಾಯದೊಂದಿಗೆ, ಸೆನ್ಸೆಕ್ಸ್ ಕಳೆದ 5 ವಹಿವಾಟು ಅವಧಿಗಳಲ್ಲಿ 2,290 ಅಂಕಗಳನ್ನು ಕಳೆದುಕೊಂಡಿದೆ. ಭಾರತದ ಷೇರು ಮಾರುಕಟ್ಟೆಯು ಸತತ ಐದು ದಿನಗಳಿಂದ ಇಳಿಕೆಯತ್ತ ಸಾಗಿದೆ.
ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 309.80 ಪಾಯಿಂಟ್ಗಳು ಅಥವಾ ಶೇಕಡಾ 1.32 ರಷ್ಟು ಕುಸಿದು 23,071.80 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ಒಂದು ದಿನದ ಗರಿಷ್ಠ 23,390.05 ಹಾಗೂ ಕನಿಷ್ಠ 22,986.65 ಗಳ ಮಧ್ಯೆ ವಹಿವಾಟು ನಡೆಸಿತು.
ನಿಫ್ಟಿ 50 ಯ 50 ಘಟಕ ಷೇರುಗಳ ಪೈಕಿ 44 ಷೇರುಗಳು ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿಯಲ್ಲಿ ಐಷರ್ ಮೋಟರ್ಸ್, ಅಪೊಲೊ ಆಸ್ಪತ್ರೆ, ಶ್ರೀರಾಮ್ ಫೈನಾನ್ಸ್, ಕೋಲ್ ಇಂಡಿಯಾ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಷೇರುಗಳು ಮಂಗಳವಾರ ಶೇಕಡಾ 6.70 ರಷ್ಟು ನಷ್ಟದೊಂದಿಗೆ ಕೊನೆಗೊಂಡವು. ಅದಾನಿ ಎಂಟರ್ ಪ್ರೈಸಸ್, ಟ್ರೆಂಟ್, ಗ್ರಾಸಿಮ್, ಭಾರ್ತಿ ಏರ್ ಟೆಲ್ ಮತ್ತು ಹಿಂಡಾಲ್ಕೊ ಮಾತ್ರ ನಿಫ್ಟಿ 50 ಯಲ್ಲಿ ಶೇಕಡಾ 0.76 ರವರೆಗೆ ಲಾಭದೊಂದಿಗೆ ಕೊನೆಗೊಂಡವು.
ನಿಫ್ಟಿ ಸ್ಮಾಲ್ ಕ್ಯಾಪ್ 100 ಮತ್ತು ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕಗಳು ಕ್ರಮವಾಗಿ ಶೇಕಡಾ 3.45 ಮತ್ತು ಶೇಕಡಾ 3.02 ರಷ್ಟು ಕುಸಿದವು. ಎನ್ಎಸ್ಇಯ ಎಲ್ಲಾ ವಲಯ ಸೂಚ್ಯಂಕಗಳು ಇಳಿಕೆಯೊಂದಿಗೆ ಕೊನೆಗೊಂಡವು. ಅವುಗಳ ಪೈಕಿ ನಿಫ್ಟಿ ಪಿಎಸ್ಯು ಬ್ಯಾಂಕ್, ಆಟೋ, ಹೆಲ್ತ್ ಕೇರ್, ರಿಯಾಲ್ಟಿ ಮತ್ತು ಮಾಧ್ಯಮ ಸೂಚ್ಯಂಕಗಳು ಶೇಕಡಾ 3.28 ರವರೆಗೆ ನಷ್ಟದೊಂದಿಗೆ ಕೊನೆಗೊಂಡವು. ನಿಫ್ಟಿ ಐಟಿ, ಎಫ್ ಎಂಸಿಜಿ ಮತ್ತು ಗ್ರಾಹಕ ಬೆಲೆಬಾಳುವ ವಸ್ತುಗಳ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಕುಸಿದವು.
ಮಂಗಳವಾರ ರೂಪಾಯಿ 63 ಪೈಸೆ ಏರಿಕೆಯಾಗಿದ್ದು, ಇದು ಸುಮಾರು ಎರಡು ವರ್ಷಗಳಲ್ಲಿ ಒಂದು ದಿನದಲ್ಲಿನ ಅತ್ಯಧಿಕ ಏರಿಕೆಯಾಗಿದೆ. ಮಂಗಳವಾರ ಯುಎಸ್ ಡಾಲರ್ ವಿರುದ್ಧ ರೂಪಾಯಿ 86.82 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ವಿರುದ್ಧ ರೂಪಾಯಿ 87.45 ರಲ್ಲಿ ಪ್ರಾರಂಭವಾಯಿತು ಮತ್ತು ವಹಿವಾಟಿನಲ್ಲಿ ಇಂಟ್ರಾಡೇ ಗರಿಷ್ಠ 86.61 ಕ್ಕೆ ತಲುಪಿತ್ತು. ಅಂತಿಮವಾಗಿ ರೂಪಾಯಿ ಡಾಲರ್ ವಿರುದ್ಧ 86.82 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 63 ಪೈಸೆ ಲಾಭವಾಗಿದೆ.
ಇದನ್ನೂ ಓದಿ: ಸೆನ್ಸೆಕ್ಸ್ 313 ಅಂಕ ಕುಸಿತ; ಡಾಲರ್ ವಿರುದ್ಧ ರೂಪಾಯಿ 87.35ಕ್ಕೆ ಇಳಿಕೆ! ಸಾರ್ವಕಾಲಿಕ ಕನಿಷ್ಠ ಮಟ್ಟ