ನವದೆಹಲಿ:ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ವಿರುದ್ಧವೇ ಗಂಭೀರ ಆರೋಪ ಕೇಳಿಬಂದಿದೆ. ಅದರ ಅಧ್ಯಕ್ಷೆ ಮಾಧವಿ ಬುಚ್ ಅವರು ಅದಾನಿ ಗ್ರೂಪ್ನಲ್ಲಿ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂದು ಅಮೆರಿಕ ಮೂಲದ ಹಿಂಡೆನ್‌ಬರ್ಗ್ ಆರೋಪಿಸಿದೆ. ಇದರಿಂದ ಅದಾನಿ ಗ್ರೂಪ್ ಅವ್ಯವಹಾರಗಳ ತನಿಖೆ ಸೂಕ್ತವಾಗಿ ನಡೆಯುತ್ತಿಲ್ಲ ಎಂದು ಅದರ ವರದಿ ಹೇಳಿದೆ.
ಅದಾನಿ ಗ್ರೂಪ್ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಅಮೆರಿಕ ಮೂಲದ ಕಂಪನಿಯಾದ ಹಿಂಡೆನ್‌ಬರ್ಗ್ ಈ ಹಿಂದೆ ಆರೋಪ ಮಾಡಿತ್ತು. ಇದರ ವಿರುದ್ಧ ಅದಾನಿ ಗ್ರೂಪ್ ಕಾನೂನು ಸಮರ ಸಾರಿದೆ. ಆರೋಪದ ವಿಚಾರಣೆಯನ್ನು ಭಾರತದ ಸೆಬಿ ಆರಂಭಿಸಿದೆ. ಆದರೆ, ಇದೀಗ ಸೆಬಿಯ ಅಧ್ಯಕ್ಷರ ವಿರುದ್ಧವೇ ಇಂಥದ್ದೊಂದು ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣ ಮತ್ತಷ್ಟು ಬಿರುಸು ಪಡೆದಿದೆ.
ಸೆಬಿ ಅಧ್ಯಕ್ಷೆ ಮಾಧವಿ ಮತ್ತು ಅವರ ಪತಿ ಧವಳ್ ಬುಚ್ ಅವರು ಅದಾನ ಗ್ರೂಪ್ನ ಹಲವು ಷೇರುಗಳಲ್ಲಿ ಪಾಲುದಾರರಾಗಿದ್ದಾರೆ. ಇವನ್ನು ಸೆಬಿ ಸಂಸ್ಥೆಯೇ ಪಟ್ಟಿ ಮಾಡಿದೆ ಎಂದು ಹಿಂಡೆನ್‌ಬರ್ಗ್ ವರದಿ ಹೇಳಿದ್ದರೆ, ಇದನ್ನು ಮಾಧವಿ ಬುಚ್ ಅವರು ನಿರಾಕರಿಸಿದ್ದಾರೆ.
SEBI ಎಂದರೇನು ಮತ್ತು ಅದರ ಕಾರ್ಯಗಳೇನು?
- ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿದೆ. ಸೆಕ್ಯುರಿಟೀಸ್ ಮಾರುಕಟ್ಟೆಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. SEBI ಕಾಯ್ದೆ 1992 ರ ಅಡಿಯಲ್ಲಿ ಇದನ್ನು ಜಾರಿ ಮಾಡಲಾಗಿದೆ.
- SEBI ಕಾಯ್ದೆ, ಸೆಕ್ಯುರಿಟೀಸ್ ಕಾಂಟ್ರಾಕ್ಟ್ (ನಿಯಂತ್ರಣ) ಕಾಯ್ದೆ- 1956, ಠೇವಣಿ ಕಾಯ್ದೆ- 1996, ಕಂಪನಿಗಳ ಕಾಯ್ದೆ- 2013 ಮತ್ತು ಇತರ ನಿಯಮಗಳಡಿ ವಿವಾದಗಳನ್ನು ಇತ್ಯರ್ಥಗೊಳಿಸುವ ಅಧಿಕಾರ SEBI ಹೊಂದಿದೆ.
- ಸೆಬಿ ಭಾರತದಲ್ಲಿ ಸೆಕ್ಯುರಿಟೀಸ್ ಮಾರುಕಟ್ಟೆಯ ಅಭಿವೃದ್ಧಿ ಮತ್ತು ನಿಯಂತ್ರಣ ಹೊಂದಿದೆ. ಜಾಗೃತಿ ಕಾರ್ಯಕ್ರಮಗಳು, ಹಣಕಾಸು ಜ್ಞಾನ, ಹೂಡಿಕೆದಾರರ ಕುಂದುಕೊರತೆಗಳ ಪರಿಹಾರದ ಮೂಲಕ ಹೂಡಿಕೆದಾರರ ರಕ್ಷಣೆಯನ್ನು ಕಾಪಾಡುತ್ತದೆ.
- ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸೆಕ್ಯುರಿಟೀಸ್ (IOSCO) ಅಡಿಯಲ್ಲಿ SEBI ಜಾಗತಿಕ ಭದ್ರತಾ ಮಾನದಂಡಗಳ ಮೇಲೆ ಕಾರ್ಯನಿರ್ವಹಿಸುತ್ತದೆ.
ಅದಾನಿ ಗ್ರೂಪ್ ವಿರುದ್ಧದ ಹಿಂಡೆನ್‌ಬರ್ಗ್ ಆರೋಪಗಳ ತನಿಖೆಯನ್ನು ಸೆಬಿ ಆರಂಭಿಸಿದೆ. ಷೇರು ಬೆಲೆ ಮತ್ತು ಲೆಕ್ಕಪತ್ರ ವಂಚನೆ ಬಗ್ಗೆ ಸೆಬಿ ಆರೋಪಿಸಿತ್ತು. ಅದಾನಿ ಗ್ರೂಪ್ನ 13 ವಿದೇಶಿ ಕಂಪನಿಗಳ ಷೇರುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಗೆ ಸೆಬಿ ತಿಳಿಸಿತ್ತು. ಇದಾದ ಬಳಿಕ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ಆರೋಪ ಮಾಡಿ, ಅನ್ಯಮಾರ್ಗದಿಂದ ಖ್ಯಾತಿ ಗಳಿಸಲು ಪ್ರಯತ್ನಿಸುತ್ತಿದೆ ಎಂದು ಸೆಬಿ ಆರೋಪಿಸಿತ್ತು.
ಈ ವರ್ಷದ ಆರಂಭದಲ್ಲಿ ಸೆಬಿಯು ಅದಾನಿ ಗ್ರೂಪ್ನ ಪ್ರಮುಖ ಕಂಪನಿಗಳಿಗೆ ಶೋಕಾಸ್ ನೋಟಿಸ್ ಕಳುಹಿಸಿದ್ದರೂ, ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಿದ್ದ ತನಿಖೆಯ ಅಂತಿಮ ವರದಿ ಇನ್ನೂ ಬಾಕಿ ಉಳಿಸಿಕೊಂಡಿದೆ. ಇದರ ಹೊರತಾಗಿ, ಕಳೆದ ತಿಂಗಳು ಸೆಬಿ ಹಿಂಡೆನ್‌ಬರ್ಗ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಸುಳ್ಳು ಮಾಹಿತಿಯನ್ನು ನೀಡಿ, ಸಂಸ್ಥೆಯು ಅದಾನಿ ಗ್ರೂಪ್ ಷೇರುಗಳಲ್ಲಿ ಅಕ್ರಮ ಲಾಭ ಗಳಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ:ಅದಾನಿ ಗ್ರೂಪ್ ವಿದೇಶಿ ಷೇರುಗಳಲ್ಲಿ ಸೆಬಿ ಅಧ್ಯಕ್ಷರ ಪಾಲು: ಹಿಂಡನ್ಬರ್ಗ್ ವರದಿ - Hindenburg on SEBI Chairperson