ದಾವಣಗೆರೆ: ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಪರಾಧಿಗೆ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
2022ರ ಡಿಸೆಂಬರ್ 3ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು 80 ವರ್ಷದ ವೃದ್ಧೆಯೊಬ್ಬರು ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವೃದ್ಧೆ ಮನೆಯಲ್ಲಿ ಇರುವಾಗ ಬೆಳಗಿನ ಜಾವ ಅದೇ ಗ್ರಾಮದ ನಿವಾಸಿ ರವಿ (30) ಎಂಬಾತ ಅಕ್ರಮವಾಗಿ ಮನೆಯೊಳಗೆ ಪ್ರವೇಶಿಸಿ ಅತ್ಯಾಚಾರ ಎಸಗಿದ್ದ. ಈ ವೇಳೆ ವೃದ್ಧೆ ಕಿರುಚಿದ್ದು, ಅಕ್ಕಪಕ್ಕದವರು ಬಂದಾಗ ಆರೋಪಿ ಪರಾರಿಯಾಗಿದ್ದಾನೆ ಎಂದು ದೂರು ನೀಡಿದ್ದರು.
ಪ್ರಕರಣ ಸಂಬಂಧ ಅಂದಿನ ಪಿಐ ಸಿದ್ದೇಗೌಡ ಹೆಚ್.ಎಂ. ತನಿಖೆ ಕೈಗೊಂಡಿದ್ದರು. ಆರೋಪಿ ರವಿ ಕೃತ್ಯ ಎಸಗಿರುವ ಬಗ್ಗೆ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಆರೋಪ ಸಾಬೀತಾಗಿದ್ದರಿಂದ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30,000 ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ದಂಡದ ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ವಾದ ಮಂಡಿಸಿದ್ದರು.
ಇದನ್ನೂ ಓದಿ: ಐಪಿಸಿ ಕಾಯ್ದೆ ಪಠ್ಯಕ್ರಮದಲ್ಲಿ ಪರೀಕ್ಷೆ ನಡೆಸಿ: ಕೆಎಸ್‌ಎಲ್‌ಯುಗೆ ಹೈಕೋರ್ಟ್ ಸೂಚನೆ