What happened in share market: ಶುಕ್ರವಾರ ಅಮೆರಿಕದ ಮಾರುಕಟ್ಟೆಗಳಲ್ಲಿ ಕಳೆದ 18 ತಿಂಗಳಲ್ಲೇ ಅತ್ಯಂತ ದೊಡ್ಡದಾದ ಕುಸಿತ ಕಂಡು ಬಂದಿದೆ. ಈ ಮೂಲಕ ಹೂಡಿಕೆದಾರರು ಲಕ್ಷ ಲಕ್ಷ ಕೋಟಿಗಳಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ನಾಸ್ಡಾಕ್ ಕಾಂಪೋಸಿಟ್ ಶೇ 2.6ರಷ್ಟು ನಷ್ಟ ಅನುಭವಿಸಿದೆ. S&P 500 ಸುಮಾರು 1.7 ಶೇಕಡಾರಷ್ಟು ಕೆಳಕ್ಕೆ ಇಳಿದಿದೆ. ಡೌ ಜೋನ್ಸ್ 410 ಅಂಕಗಳನ್ನು (1 ಶೇಕಡಾ) ಕಳೆದುಕೊಂಡಿದೆ. ಬ್ರಾಡ್‌ಕಾಮ್ ಮತ್ತು ಎನ್‌ವಿಡಿಯಾದಂತಹ ತಂತ್ರಜ್ಞಾನ ಷೇರುಗಳಲ್ಲಿ ಭಾರಿ ಕುಸಿತ ಮತ್ತು ಅಮೆರಿಕದ ಉದ್ಯೋಗ ಸೃಷ್ಟಿ ದರವು ತೀವ್ರವಾಗಿ ಕೆಳಕ್ಕೆ ಇಳಿದಿರುವುದು ಈ ಮಹಾ ನಷ್ಟಕ್ಕೆ ಕಾರಣ ಎಂದು ವರದಿಯೊಂದು ಹೇಳಿದೆ.
ಅಮೆರಿಕದಲ್ಲಿ ಉತ್ಪಾದನಾ ವಲಯ ಸದ್ಯ ದುರ್ಬಲವಾಗಿದೆ. ಮತ್ತೊಂದೆಡೆ ಹಣದುಬ್ಬರ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಏರುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಅವರು ಪ್ರಸ್ತುತ ಯುಎಸ್ ಉದ್ಯೋಗ ಮಾರುಕಟ್ಟೆಯನ್ನು ರಕ್ಷಿಸಲು ಮತ್ತು ಆರ್ಥಿಕ ಹಿಂಜರಿತವನ್ನು ತಡೆಗಟ್ಟುವತ್ತ ತಮ್ಮ ಗಮನವನ್ನು ಹರಿಸಿದ್ದಾರೆ. ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಫೆಡರಲ್ ರಿಸರ್ವ್ ಸಭೆಯಲ್ಲಿ ಪ್ರಮುಖವಾಗಿ ಬಡ್ಡಿದರಗಳು ಎಷ್ಟರಮಟ್ಟಿಗೆ ಇಳಿಕೆಯಾಗಲಿವೆ ಎಂಬುದರ ಮೇಲೆ ಮಾರುಕಟ್ಟೆಯ ಭವಿಷ್ಯವೂ ನಿಂತಿದೆ.
ಪ್ರಮುಖವಾಗಿ ಬಡ್ಡಿದರಗಳನ್ನು ಕಡಿಮೆ ಮಾಡಿದರೆ, ಹೂಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಫೆಡ್ ಈಗಾಗಲೇ ಈ ವಿಚಾರದಲ್ಲಿ ಸಾಕಷ್ಟು ವಿಳಂಬ ಮಾಡಿದೆ ಎಂಬ ವಾದಗಳು ಕೇಳಿ ಬರುತ್ತಿವೆ. ಅಮೆರಿಕ ಆರ್ಥಿಕ ಹಿಂಜರಿತದಿಂದ ಬಳಲುತ್ತಿದ್ದರೆ, ಕಾರ್ಪೊರೇಟ್ ಲಾಭಗಳು ಖಂಡಿತವಾಗಿಯೂ ಕಡಿಮೆಯಾಗುತ್ತವೆ. ಆಗ ಪ್ರಮುಖ ಬಡ್ಡಿದರಗಳನ್ನು ಕಡಿತಗೊಳಿಸಿದರೂ ಪ್ರಯೋಜನವಾಗುವುದಿಲ್ಲ. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿದೆ. ಆದರೆ ಈ ಫೆಡರಲ್ ರಿಸರ್ವ್ ನಿರ್ಧಾರಗಳು ಮತ್ತು ಅಮೆರಿಕ ಮಾರುಕಟ್ಟೆಗಳ ಲಾಭ ಮತ್ತು ನಷ್ಟಗಳು ಭಾರತೀಯ ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಾ ಇಲ್ಲವೇ ಎಂಬುದು ಇಲ್ಲಿ ಮುಖ್ಯವಾಗಿದೆ. ಆ ಬಗ್ಗೆ ನೋಡುವುದಾದರೆ,
ಇದು ಭಾರತದ ಮೇಲೆ ಪರಿಣಾಮ ಬೀರಲಿದೆಯೇ?:ಜಾಗತಿಕ ಮಾರುಕಟ್ಟೆಗಳ ಪ್ರಭಾವ ಖಂಡಿತವಾಗಿಯೂ ಭಾರತೀಯ ಷೇರು ಮಾರುಕಟ್ಟೆಗಳ ಮೇಲೆ ಇದ್ದೇ ಇರುತ್ತದೆ. ಅದಕ್ಕಿಂತ ಮುಖ್ಯವಾಗಿ ಅಮೆರಿಕದ ಫೆಡರಲ್ ರಿಸರ್ವ್ ತೆಗೆದುಕೊಳ್ಳುವ ನಿರ್ಧಾರಗಳು ಖಂಡಿತವಾಗಿಯೂ ಭಾರತೀಯ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಫೆಡ್ ಬಡ್ಡಿದರಗಳನ್ನು ಹೆಚ್ಚಿಸಿದರೆ, ವಿದೇಶಿ ಸಾಂಸ್ಥಿಕ ಹೂಡಿಕೆಯು ಭಾರತದಿಂದ ಹೊರಬರುತ್ತದೆ. ಫೆಡರಲ್ ರಿಸರ್ವ್ ಪ್ರಮುಖ ಬಡ್ಡಿದರಗಳನ್ನು ಕಡಿತಗೊಳಿಸಿದರೆ ಭಾರತಕ್ಕೆ ವಿದೇಶಿ ಹೂಡಿಕೆ ಮತ್ತಷ್ಟು ಹೆಚ್ಚಾಗಲಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 621 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಸ್ಟಾಕ್ ಎಕ್ಸ್ಚೇಂಜ್ ಡೇಟಾ ವರದಿ ಹೇಳುತ್ತಿದೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು 2,121 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಇದು ಇನ್ನಷ್ಟು ಕುಸಿತವನ್ನು ತಡೆದಿದೆ. ಈಗೀಗ ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿದರೆ, ದೇಶೀಯ ಹೂಡಿಕೆದಾರರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.