ಸ್ಯಾನ್ ಫ್ರಾನ್ಸಿಸ್ಕೋ :ಎಲೋನ್ ಮಸ್ಕ್ ನೇತೃತ್ವದ ಟೆಸ್ಲಾ ಕಂಪನಿಯು ಜಾಗತಿಕವಾಗಿ ಶೇ 10ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಮುಂದಿನ ಹಂತದ ಬೆಳವಣಿಗೆಗಾಗಿ ಕಂಪನಿಯು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ಇಮೇಲ್ನಲ್ಲಿ ಎಲೋನ್ ಮಸ್ಕ್ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
"ಟೆಸ್ಲಾ ಬೆಳವಣಿಗೆಯಾಗುತ್ತಿದ್ದಂತೆ ಕಂಪನಿಯಲ್ಲಿ ಒಂದೇ ರೀತಿಯ ಕೆಲಸ ಮಾಡುವ ಹಲವಾರು ಅನಗತ್ಯ ಹುದ್ದೆಗಳು ಸೃಷ್ಟಿಯಾಗಿವೆ. ನಾವು ಸಂಸ್ಥೆಯ ಸಮಗ್ರ ಪರಿಶೀಲನೆ ನಡೆಸಿದ್ದೇವೆ ಮತ್ತು ಜಾಗತಿಕವಾಗಿ ನಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಶೇಕಡಾ 10 ಕ್ಕಿಂತ ಕಡಿಮೆ ಮಾಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ. ಉದ್ಯೋಗಿಗಳನ್ನು ವಜಾಗೊಳಿಸುವುದು ನನಗೆ ಒಂಚೂರೂ ಇಷ್ಟವಿಲ್ಲ. ಆದರೆ, ಅದನ್ನು ಮಾಡಲೇಬೇಕಿದೆ. ಇದು ಮುಂದಿನ ಬೆಳವಣಿಗೆಯ ಹಂತಕ್ಕೆ ಸಾಗಲು ನಮಗೆ ಅನುವು ಮಾಡಿಕೊಡುತ್ತದೆ" ಎಂದು ಮಸ್ಕ್ ಇಮೇಲ್ನಲ್ಲಿ ಬರೆದಿದ್ದಾರೆ.
ವರದಿಗಳ ಪ್ರಕಾರ ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಟೆಸ್ಲಾದಲ್ಲಿ 2023ರ ಕೊನೆಯಲ್ಲಿ 1,40,000 ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ಸಂಖ್ಯೆಯ ಪ್ರಕಾರ 14 ಸಾವಿರಕ್ಕೂ ಹೆಚ್ಚು ಟೆಸ್ಲಾ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು. ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಇಳಿಕೆಯಾಗುತ್ತಿದೆ ಎಂದು ಟೆಸ್ಲಾ ಎರಡು ವಾರಗಳ ಹಿಂದೆ ಹೇಳಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಉದ್ಯೋಗ ಕಡಿತವನ್ನು ಕಂಪನಿ ಘೋಷಿಸಿರುವುದು ಗಮನಾರ್ಹ.