ನವದೆಹಲಿ: ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಕೇಂದ್ರ ಬಜೆಟ್‌ನಲ್ಲಿ ಭರಪೂರ ಕೊಡುಗೆ ನೀಡಲಾಗಿದೆ. ಮಖಾನಾ ಮಂಡಳಿ, ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಮತ್ತು ಮಿಥಿಲಾಂಚಲ್ ಪ್ರದೇಶದಲ್ಲಿ ಪಶ್ಚಿಮ ಕೋಶಿ ಕಾಲುವೆ ಯೋಜನೆಗೆ ಆರ್ಥಿಕ ನೆರವು ಸೇರಿ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
2025-26ರ ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯನ್ನು ಸ್ಥಾಪಿಸುವುದಾಗಿ ಪ್ರಕಟಿಸಿದರು. ಅಲ್ಲದೇ, ಐಐಟಿ ಪಾಟ್ನಾದಲ್ಲಿ ಹಾಸ್ಟೆಲ್ ಮತ್ತು ಇತರ ಮೂಲಸೌಕರ್ಯ ಸಾಮರ್ಥ್ಯದ ವಿಸ್ತರಣೆ ಮಾಡುವುದಾಗಿ ಘೋಷಿಸಿದರು.
ಜೊತೆಗೆ, ಪಾಟ್ನಾ ವಿಮಾನ ನಿಲ್ದಾಣದ ಸಾಮರ್ಥ್ಯ ವಿಸ್ತರಣೆ ಮತ್ತು ಬಿಹ್ತಾದಲ್ಲಿ ಬ್ರೌನ್‌ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿ ಬಗ್ಗೆಯೂ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಬಿಹಾರದಲ್ಲಿ ಮಖಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಿಸುವಾಗ, ಸೀತಾರಾಮನ್, "ಬಿಹಾರದ ಜನರಿಗೆ ವಿಶೇಷ ಅವಕಾಶವಿದೆ. ಮಖಾನಾದ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯನ್ನು ಸುಧಾರಿಸಲು ರಾಜ್ಯದಲ್ಲಿ ಮಖಾನಾ ಮಂಡಳಿ ಸ್ಥಾಪಿಸಲಾಗುವುದು'' ಎಂದರು.
ಮಖಾನಾ ಚಟುವಟಿಕೆಗಳಲ್ಲಿ ತೊಡಗಿರುವ ಜನರನ್ನು ಎಫ್ಪಿಒಗಳಾಗಿ (ರೈತ ಉತ್ಪಾದಕ ಸಂಸ್ಥೆ) ಸಂಘಟಿಸಲಾಗುವುದು. ಇದು ಮಖಾನಾ ರೈತರಿಗೆ ಬೆಂಬಲ ಮತ್ತು ತರಬೇತಿಯನ್ನು ನೀಡಲಿದೆ. ಈ ಎಫ್ಪಿಒಗಳು ಜನರು ಎಲ್ಲಾ ಸಂಬಂಧಿತ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯ ನಿರ್ವಹಿಸಲಿವೆ ಎಂದು ಸೀತಾರಾಮನ್ ಹೇಳಿದರು.
ಪೂರ್ವೋದಯ ಯೋಜನೆ: ಇದಲ್ಲದೆ, "ಪೂರ್ವೋದಯ"ದ ಕಡೆಗೆ ಸರ್ಕಾರದ ಬದ್ಧತೆಗೆ ಅನುಗುಣವಾಗಿ, ನಾವು ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯನ್ನು ಸ್ಥಾಪಿಸುತ್ತೇವೆ" ಎಂದು ಸೀತಾರಾಮನ್ ಹೇಳಿದರು.
ಪೂರ್ವೋದಯ ಯೋಜನೆಯಡಿಯಲ್ಲಿ, ಸರ್ಕಾರವು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶವನ್ನು ಒಳಗೊಂಡ ಪೂರ್ವ ಪ್ರದೇಶದ ರಾಜ್ಯಗಳ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ.
ಈ ಸಂಸ್ಥೆಯು ಇಡೀ ಪೂರ್ವ ಪ್ರದೇಶದಲ್ಲಿ ಆಹಾರ ಸಂಸ್ಕರಣಾ ಚಟುವಟಿಕೆಗಳಿಗೆ ಬಲವಾದ ಉತ್ತೇಜನ ನೀಡುತ್ತದೆ. ಇದು ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮತ್ತು ಕೌಶಲ್ಯ, ಉದ್ಯಮಶೀಲತೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳ ಮೂಲಕ ಆದಾಯದ ಹೆಚ್ಚಳಕ್ಕೆ ನೆರವಾಗಲಿದೆ.
ಇದಲ್ಲದೇ, ಬಿಹಾರದ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸುಗಮಗೊಳಿಸಲಾಗುವುದು. ಪಾಟ್ನಾ ವಿಮಾನ ನಿಲ್ದಾಣದ ಸಾಮರ್ಥ್ಯದ ವಿಸ್ತರಣೆ ಮತ್ತು ಬಿಹ್ತಾದಲ್ಲಿ ಬ್ರೌನ್‌ಫೀಲ್ಡ್ ವಿಮಾನ ನಿಲ್ದಾಣದ ಯೋಜನೆ ಕೈಗೊಳ್ಳಲಾಗುವುದು ಎಂದರು.
ಜೊತೆಗೆ, ಬಿಹಾರದ ಮಿಥಿಲಾಂಚಲ್ ಪ್ರದೇಶದಲ್ಲಿ ಪಶ್ಚಿಮ ಕೋಶಿ ಕಾಲುವೆ ಯೋಜನೆಗೆ ಹಣಕಾಸು ಸಚಿವರು ಬೆಂಬಲ ಘೋಷಣೆ ಮಾಡಲಾಗಿದೆ. ''ಮಿಥಿಲಾಂಚಲ್ ಪ್ರದೇಶದಲ್ಲಿ 50,000 ಹೆಕ್ಟೇರ್‌ಗಳಿಗಿಂತ ಹೆಚ್ಚು ಭೂಮಿ ಸಾಗುವಳಿ ಮಾಡುವ ಹೆಚ್ಚಿನ ಸಂಖ್ಯೆಯ ರೈತರಿಗೆ ಪ್ರಯೋಜನವಾಗುವ ಪಶ್ಚಿಮ ಕೋಶಿ ಕಾಲುವೆ ERM ಯೋಜನೆಗೆ ಹಣಕಾಸಿನ ನೆರವು ನೀಡಲಾಗುವುದು" ಎಂದು ಸೀತಾರಾಮನ್ ಹೇಳಿದರು.
ಈ ಹಿಂದೆಯೂ ಕೂಡ ಜುಲೈ 2024ರಲ್ಲಿ ಮಂಡನೆಯಾದ ಬಜೆಟ್‌ನಲ್ಲೂ, ಕೇಂದ್ರವು ಬಿಹಾರಕ್ಕೆ ಹಲವಾರು ದೊಡ್ಡ ಯೋಜನೆಗಳನ್ನು ಘೋಷಿಸಿತ್ತು. ಮೂರು ಎಕ್ಸ್‌ಪ್ರೆಸ್‌ವೇ ಯೋಜನೆಗಳು, ವಿದ್ಯುತ್ ಸ್ಥಾವರ, ಪಾರಂಪರಿಕ ಕಾರಿಡಾರ್‌ಗಳು ಮತ್ತು ಹೊಸ ವಿಮಾನ ನಿಲ್ದಾಣಗಳು ಮತ್ತು ಕ್ರೀಡಾ ಮೂಲಸೌಕರ್ಯಗಳಿಗೆ ಹಣಕಾಸು ಸೇರಿದಂತೆ ವಿವಿಧ ಯೋಜನೆಗಳಿಗೆ ಒಟ್ಟು 60,000 ಕೋಟಿ ರೂ.ಗಳಿಗಿಂತ ಹೆಚ್ಚಿನ ವೆಚ್ಚವನ್ನು ಪ್ರಸ್ತಾಪ ಮಾಡಿತ್ತು. ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್: ₹20,000 ಕೋಟಿ ಪರಮಾಣು ಇಂಧನ ಮಿಷನ್ ಘೋಷಣೆ; 2047ರ ವೇಳೆಗೆ 100 ಗಿಗಾವ್ಯಾಟ್ ಉತ್ಪಾದನೆ ಗುರಿ