ನವದೆಹಲಿ: ಕೇಂದ್ರ ಬಜೆಟ್ 2024 ಮಂಡನೆಗೆ ಒಂದು ದಿನ ಮುಂಚಿತವಾಗಿ ಹೂಡಿಕೆದಾರರು ಕಾಯಲು ನಿರ್ಧರಿಸಿದ್ದರಿಂದ ಭಾರತೀಯ ಷೇರು ಮಾರುಕಟ್ಟೆಗಳು ಸೋಮವಾರ ಅಳುಕಿನಿಂದಲೇ ವಹಿವಾಟು ನಡೆಸಿದವು. ಬಿಎಸ್ಇ ಸೆನ್ಸೆಕ್ಸ್ 102 ಪಾಯಿಂಟ್ಸ್ ಅಥವಾ ಶೇಕಡಾ 0.13 ರಷ್ಟು ಕುಸಿದು 80,502 ರಲ್ಲಿ ಕೊನೆಗೊಂಡರೆ, ನಿಫ್ಟಿ50 22 ಪಾಯಿಂಟ್ಸ್ ಅಥವಾ ಶೇಕಡಾ 0.09 ರಷ್ಟು ಕುಸಿದು 24,509 ರಲ್ಲಿ ಕೊನೆಗೊಂಡಿತು.
ವಿಶಾಲ ಮಾರುಕಟ್ಟೆಗಳಲ್ಲಿ ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 1.3 ಮತ್ತು ಶೇಕಡಾ 0.85 ರಷ್ಟು ಏರಿಕೆ ಕಂಡು ಎರಡು ದಿನಗಳಿಂದ ಅನುಭವಿಸಿದ ನಷ್ಟವನ್ನು ಕಡಿಮೆ ಮಾಡಿಕೊಂಡವು. ವಲಯವಾರು ನೋಡುವುದಾದರೆ, ನಿಫ್ಟಿ ಆಟೋ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ ಶೇಕಡಾ 1 ಕ್ಕಿಂತ ಹೆಚ್ಚಾಗಿವೆ. ನಿಫ್ಟಿ ಮೀಡಿಯಾ ಮತ್ತು ಐಟಿ ಸೂಚ್ಯಂಕಗಳು ಶೇಕಡಾ 0.7 ರಷ್ಟು ಕುಸಿದವು.
ರೂಪಾಯಿ 3 ಪೈಸೆ ಏರಿಕೆ: ಸಾಗರೋತ್ತರ ಮಾರುಕಟ್ಟೆಯಲ್ಲಿ, ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಸೋಮವಾರ 3 ಪೈಸೆ ಏರಿಕೆಯಾಗಿ ಪ್ರತಿ ಡಾಲರ್ಗೆ 83.67 ಕ್ಕೆ ತಲುಪಿದೆ (ತಾತ್ಕಾಲಿಕ). ಕಚ್ಚಾ ತೈಲ ಬೆಲೆಗಳು ಗರಿಷ್ಠ ಮಟ್ಟದಿಂದ ಸ್ವಲ್ಪ ಕೆಳಗೆ ಇಳಿಕೆಯಾಗಿದ್ದರಿಂದ ರೂಪಾಯಿ ಬಲಗೊಂಡಿತು. ಭಾರತೀಯ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿದೆ ಮತ್ತು ದುರ್ಬಲ ದೇಶೀಯ ಮಾರುಕಟ್ಟೆಗಳು ರೂಪಾಯಿ ಮೇಲೆ ಒತ್ತಡ ಹೇರಿದ್ದರಿಂದ ಸಂಕುಚಿತ ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.