ತಿರುವನಂತಪುರಂ: ಡಿಸೆಂಬರ್ 24 ಮತ್ತು 25ರ ಕ್ರಿಸ್ ಮಸ್ ದಿನಗಳಲ್ಲಿ ಕೇರಳದಲ್ಲಿ 152 ಕೋಟಿ ರೂಪಾಯಿ ಮೊತ್ತದ ಮದ್ಯ ಮಾರಾಟವಾಗಿದೆ ಎಂದು ಕೇರಳ ರಾಜ್ಯ ಪಾನೀಯ ನಿಗಮ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ. 2023 ರ ಕ್ರಿಸ್ ಮಸ್ ಅವಧಿಯಲ್ಲಿ ಮಾರಾಟವಾಗಿದ್ದ 122.14 ಕೋಟಿ ಮೌಲ್ಯದ ಮದ್ಯ ಮಾರಾಟಕ್ಕೆ ಹೋಲಿಸಿದರೆ ಈ ವರ್ಷ ಮಾರಾಟದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.
ನಿಗಮದ ಒಡೆತನದ 277 ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಮದ್ಯವನ್ನು ಮಾರಾಟ ಮಾಡಲಾಗುತ್ತದೆ. ಹಾಗೆಯೇ ಸರ್ಕಾರಿ ಬೆಂಬಲಿತ ಸಹಕಾರಿ ಸಂಸ್ಥೆ ಕನ್ಸೂಮರ್ ಫೆಡ್ 39 ಚಿಲ್ಲರೆ ಮಳಿಗೆಗಳನ್ನು ಹೊಂದಿದೆ. ಡಿಸೆಂಬರ್ 24 ರಂದು 97.42 ಕೋಟಿ ರೂ. ಮತ್ತು ಕ್ರಿಸ್ ಮಸ್ ದಿನದಂದು 54.64 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
2022-23ರಲ್ಲಿ 18,510.98 ಕೋಟಿ ರೂ.ಗಳಷ್ಟಿದ್ದ ಮದ್ಯ ಮತ್ತು ಬಿಯರ್ ಮಾರಾಟವು ಈ ಬಾರಿ 19,088.68 ಕೋಟಿ ರೂ.ಗೆ ತಲುಪಿದ್ದು, ಹಿಂದಿನ ಹಣಕಾಸು ವರ್ಷದ ಮಾರಾಟಕ್ಕಿಂತ ಹೆಚ್ಚಾಗುವುದು ಖಚಿತವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಬಿಯರ್ ಮತ್ತು ಮದ್ಯ ಮಾರಾಟದ ಮೂಲಕ ಸಂಗ್ರಹವಾದ ತೆರಿಗೆಗಳಿಂದ ಕೇರಳ ರಾಜ್ಯದ ಬೊಕ್ಕಸ ತುಂಬುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಮದ್ಯ ಮಾರಾಟದಿಂದ ಕೇರಳ ಬೊಕ್ಕಸಕ್ಕೆ 16,609.63 ಕೋಟಿ ರೂ. ಹರಿದು ಬಂದಿತ್ತು. 2022-23ರಲ್ಲಿ ಇದು 16,189.55 ಕೋಟಿ ರೂ. ಆಗಿತ್ತು.
ಕೇರಳದ 3.34 ಕೋಟಿ ಜನಸಂಖ್ಯೆಯ ಪೈಕಿ ಸುಮಾರು 32.9 ಲಕ್ಷ ಜನ ಮದ್ಯ ಸೇವಿಸುತ್ತಾರೆ. ಇದರಲ್ಲಿ 29.8 ಲಕ್ಷ ಪುರುಷರು ಮತ್ತು 3.1 ಲಕ್ಷ ಮಹಿಳೆಯರು ಸೇರಿದ್ದಾರೆ.
ಪಿಣರಾಯಿ ವಿಜಯನ್ ಸರ್ಕಾರದ ಕರಡು ಮದ್ಯ ನೀತಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿರುವುದರಿಂದ ಸರ್ಕಾರದ ಹೊಸ ಮದ್ಯ ನೀತಿ ಹೇಗಿರಲಿದೆ ಎಂಬ ಬಗ್ಗೆ ಎಲ್ಲರ ಗಮನ ನೆಟ್ಟಿವೆ.
ಕೇರಳದಲ್ಲಿ ಪ್ರತಿ ತಿಂಗಳು 1ನೇ ತಾರೀಕು ಡ್ರೈ ಡೇ ಇರುತ್ತದೆ. ಅಂದರೆ ಈ ದಿನದಂದು ಮದ್ಯದ ಮಳಿಗೆಗಳು ಮುಚ್ಚಿರುತ್ತವೆ. ಈ ನಿಯಮವನ್ನು ತೆಗೆದು ಹಾಕಬೇಕೆಂದು ಮದ್ಯ ನೀತಿಯ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ. ಕಡಿಮೆ ಬೆಲೆಯ ಮದ್ಯದ ಉತ್ಪಾದನೆಯನ್ನು ಹೆಚ್ಚಿಸುವುದು, ಹಣ್ಣುಗಳಿಂದ ವೈನ್ ಉತ್ಪಾದನೆ ಮುಂತಾದ ವಿಷಯಗಳು ಕೂಡ ಕರಡಿನಲ್ಲಿವೆ. ಶೇಕಡಾ 80 ರಷ್ಟು ಮದ್ಯವು ಇತರ ರಾಜ್ಯಗಳಿಂದ ಬರುವುದರಿಂದ ರಾಜ್ಯದಲ್ಲಿ ಒಟ್ಟಾರೆ ಮದ್ಯದ ಉತ್ಪಾದನೆಯನ್ನು ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ.
ಇದನ್ನೂ ಓದಿ : ಐಆರ್ಸಿಟಿಸಿ ವೆಬ್ಸೈಟ್, ಆ್ಯಪ್ ಡೌನ್: ತತ್ಕಾಲ್ ಟಿಕೆಟ್ ಬುಕ್ ಮಾಡಲಾಗದೆ ಗ್ರಾಹಕರ ಪರದಾಟ - IRCTC WEBSITE