ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆ ಮಹಾಪತನ: ₹16 ಲಕ್ಷ ಕೋಟಿ ನಷ್ಟ, ಕುಸಿತಕ್ಕೆ 5 ಪ್ರಮುಖ ಕಾರಣಗಳು - Share Market

ಷೇರು ಮಾರುಕಟ್ಟೆ ಇಂದು ಮಹಾಪತನ ಕಂಡಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Aug 5, 2024, 5:38 PM IST

ಮುಂಬೈ: ಅಮೆರಿಕದಲ್ಲಿ ದೊಡ್ಡ ಮಟ್ಟದ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ವಾರದ ಮೊದಲ ವಹಿವಾಟಿನ ದಿನವಾದ ಆಗಸ್ಟ್ 5ರಂದು ಸೆನ್ಸೆಕ್ಸ್ 2,222 ಪಾಯಿಂಟ್ಸ್ (2.74%) ಕುಸಿದು 78,759ರಲ್ಲಿ ಕೊನೆಗೊಂಡಿದೆ. ನಿಫ್ಟಿ ಸಹ 662 ಪಾಯಿಂಟ್ಸ್ (2.68%) ಕುಸಿದು 24,055ರ ಮಟ್ಟದಲ್ಲಿ ಕೊನೆಗೊಂಡಿದೆ. ಅಲ್ಲಿಗೆ ಇಂದು ಒಂದೇ ದಿನದಲ್ಲಿ ಹೂಡಿಕೆದಾರರು 16 ಲಕ್ಷ ಕೋಟಿ ರೂ. ಕಳೆದುಕೊಂಡಂತಾಗಿದೆ.

ಇಂದಿನ ವಹಿವಾಟಿನಲ್ಲಿ ನಿಫ್ಟಿ ರಿಯಾಲ್ಟಿ, ಲೋಹ, ಸರ್ಕಾರಿ ಬ್ಯಾಂಕ್ ಮತ್ತು ಮಾಧ್ಯಮ ಸೂಚ್ಯಂಕವು ಶೇಕಡಾ 4ಕ್ಕಿಂತ ಹೆಚ್ಚು ಕುಸಿದಿದೆ. ಹಾಗೆಯೇ ಆಟೋ, ಐಟಿ ಮತ್ತು ತೈಲ ಮತ್ತು ಅನಿಲ ಸೂಚ್ಯಂಕಗಳು ಶೇಕಡಾ 3ಕ್ಕಿಂತ ಹೆಚ್ಚು ಕುಸಿದವು. ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ಎಸ್‌ಬಿಐ ಮತ್ತು ಪವರ್ ಗ್ರಿಡ್ ಸೆನ್ಸೆಕ್ಸ್​ನಲ್ಲಿ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಸಹ ಸುಮಾರು ಶೇ 4ರಷ್ಟು ಕುಸಿದವು

ಬಿಎಸ್ಇಯ ಮಿಡ್-ಕ್ಯಾಪ್ ಸೂಚ್ಯಂಕವು 1,718 ಪಾಯಿಂಟ್​ಗಳ (3.60%) ನಷ್ಟದೊಂದಿಗೆ 45,956 ಮಟ್ಟದಲ್ಲಿ ಕೊನೆಗೊಂಡಿತು. ಸ್ಮಾಲ್ ಕ್ಯಾಪ್ ಸೂಚ್ಯಂಕವು 2,297 ಪಾಯಿಂಟ್​ಗಳಿಗಿಂತ ಹೆಚ್ಚು ಕುಸಿದಿದೆ. ಇದು ಶೇಕಡಾ 4.21ರಷ್ಟು ಕುಸಿದು 52,331 ಮಟ್ಟಕ್ಕೆ ತಲುಪಿದೆ. ಬಿಎಸ್ಇ ಲಾರ್ಜ್​ಕ್ಯಾಪ್ ಸೂಚ್ಯಂಕ ಶೇಕಡಾ 2.77ರಷ್ಟು ಕುಸಿದಿದೆ.

ಹೂಡಿಕೆದಾರರಿಗೆ 16 ಲಕ್ಷ ಕೋಟಿ ರೂ. ನಷ್ಟ: ಷೇರು ಮಾರುಕಟ್ಟೆಯಲ್ಲಿನ ತೀವ್ರ ಮಾರಾಟದಿಂದಾಗಿ ಹೂಡಿಕೆದಾರರ ಸಂಪತ್ತು 16 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಆಗಸ್ಟ್ 5 ರ ಸೋಮವಾರ, ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 441 ಲಕ್ಷ ಕೋಟಿ ರೂ.ಗೆ ಇಳಿದಿದೆ. ಇದು ಶುಕ್ರವಾರ ಸುಮಾರು 457 ಲಕ್ಷ ಕೋಟಿ ರೂ. ಆಗಿತ್ತು.

ವರ್ಷದ ಎರಡನೇ ಅತಿದೊಡ್ಡ ಕುಸಿತ: ಇಂದು ಮಾರುಕಟ್ಟೆ 2,222 ಪಾಯಿಂಟ್ (2.74%) ಕುಸಿದಿದೆ. ಇದು ಈ ವರ್ಷದ ಎರಡನೇ ಅತಿದೊಡ್ಡ ಕುಸಿತವಾಗಿದೆ. ಇದಕ್ಕೂ ಮೊದಲು, ಲೋಕಸಭಾ ಚುನಾವಣೆಯ ಫಲಿತಾಂಶದ ದಿನದಂದು, ಅಂದರೆ ಜೂನ್ 4ರಂದು, ಸೆನ್ಸೆಕ್ಸ್ 4389 ಪಾಯಿಂಟ್ಸ್ (5.74%) ಕುಸಿದು 72,079 ಮಟ್ಟದಲ್ಲಿ ಕೊನೆಗೊಂಡಿತ್ತು.

ಮಾರುಕಟ್ಟೆ ಕುಸಿತಕ್ಕೆ 5 ಕಾರಣಗಳು:

  • ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಸಾಧ್ಯತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ನಕಾರಾತ್ಮಕ ಭಾವನೆ ಮೂಡಿದೆ. ಇದರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯಲ್ಲೂ ಕಂಡುಬಂದಿದೆ.
  • ಯುಎಸ್​ನಲ್ಲಿ ಆರ್ಥಿಕ ಹಿಂಜರಿತದ ಭಯ ಹೆಚ್ಚಾಗಿದೆ. ಇದರಿಂದಾಗಿ ಯುಎಸ್ ಮಾರುಕಟ್ಟೆ ಹಿಂದಿನ ವ್ಯಾಪಾರ ದಿನದಂದು ಕುಸಿದಿದೆ. ಇದರ ಪರಿಣಾಮವು ಪ್ರಪಂಚದಾದ್ಯಂತದ ಮಾರುಕಟ್ಟೆಗಳಲ್ಲಿ ಗೋಚರಿಸುತ್ತಿದೆ.
  • ವಾರೆನ್ ಬಫೆಟ್ ಅವರ ಬರ್ಕ್​ಷೈರ್​ ಹಾಥ್​ವೇ ಆಪಲ್​ನಲ್ಲಿನ ತನ್ನ ಶೇ 50ರಷ್ಟು ಪಾಲನ್ನು ಮಾರಾಟ ಮಾಡಿದೆ. ಅವರು ಈಗ ನಗದು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದಾರೆ. ಇದರಿಂದ ಇತರ ದೊಡ್ಡ ಹೂಡಿಕೆದಾರರು ಸಹ ಮಾರಾಟ ಮಾಡುತ್ತಿದ್ದಾರೆ.
  • ಭಾರತೀಯ ಷೇರು ಮಾರುಕಟ್ಟೆಯ ಪ್ರಸ್ತುತ ಮೌಲ್ಯಮಾಪನಗಳು ವಿಶೇಷವಾಗಿ ಮಧ್ಯಮ ಮತ್ತು ಸಣ್ಣ ಕ್ಯಾಪ್ ವಿಭಾಗದಲ್ಲಿ ವಾಸ್ತವಕ್ಕಿಂತ ಹೆಚ್ಚಾಗಿವೆ. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಒಂದು ಹಂತದ ಪರಿವರ್ತನೆ ಕಾಣಬಹುದು.
  • ಬ್ಯಾಂಕ್ ಆಫ್ ಜಪಾನ್ ತನ್ನ ಬಡ್ಡಿದರವನ್ನು 0% ಮತ್ತು 0.1% ರಿಂದ 0.25% ಕ್ಕೆ ಹೆಚ್ಚಿಸಿದೆ. ಇದು 15 ವರ್ಷಗಳಲ್ಲೇ ಗರಿಷ್ಠ ಮಟ್ಟವಾಗಿದೆ. ಇದು ಜಾಗತಿಕ ಭಾವನೆಯನ್ನು ದುರ್ಬಲಗೊಳಿಸಿದೆ.

ಇದನ್ನೂ ಓದಿ: ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ವಿಲೀನವಿಲ್ಲ: ಕೇಂದ್ರದ ಸ್ಪಷ್ಟೀಕರಣ - General Insurance Companies

For All Latest Updates

ABOUT THE AUTHOR

...view details