ಮುಂಬೈ: ಸತತ ಮೂರನೇ ದಿನದ ವಹಿವಾಟಿನಲ್ಲಿ ಏರಿಕೆ ಓಟವನ್ನು ಮುಂದುವರಿಸಿರುವ ಭಾರತೀಯ ಷೇರು ಸೂಚ್ಯಂಕಗಳು ಇಂದು ಮತ್ತೊಂದು ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ರಿಯಾಲ್ಟಿ ಮತ್ತು ಆಟೋ ಷೇರುಗಳಲ್ಲಿನ ಏರಿಕೆಗಳು ಮಾರುಕಟ್ಟೆಯ ಬಲಕ್ಕೆ ಕೊಡುಗೆ ನೀಡಿದವು. ಪಿಎಸ್ಯು ಷೇರುಗಳ ಲಾಭ ಗಳಿಕೆ ಇಂದಿನ ವಹಿವಾಟಿನಲ್ಲಿ ಮುಂದುವರಿಯಿತು. ಸೋಮವಾರದ ವಹಿವಾಟು ಅವಧಿಯ ಕೊನೆಯಲ್ಲಿ ಎಲ್ಲ ಪ್ರಮುಖ ವಲಯ ಸೂಚ್ಯಂಕಗಳು ಏರಿಕೆಯೊಂದಿಗೆ ಕೊನೆಗೊಂಡವು.
ಸೋಮವಾರ ನಿಫ್ಟಿ50 ಶೇಕಡಾ 0.57 ರಷ್ಟು ಅಥವಾ 148 ಅಂಕ ಏರಿಕೆಯಾಗಿ 25,939 ರಲ್ಲಿ ಕೊನೆಗೊಂಡಿತು. ಎಸ್ &ಪಿ ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.45 ರಷ್ಟು ಅಥವಾ 384 ಅಂಕ ಏರಿಕೆಯಾಗಿ 84,928 ರಲ್ಲಿ ಕೊನೆಗೊಂಡಿತು.
ಪಿಎಸ್ಯು ಬ್ಯಾಂಕ್ಗಳ ಸೂಚ್ಯಂಕದಲ್ಲಿ ಶೇ 3ಕ್ಕಿಂತ ಹೆಚ್ಚು ಏರಿಕೆ:ವಲಯ ಸೂಚ್ಯಂಕಗಳ ಪೈಕಿ ನಿಫ್ಟಿ ಪಿಎಸ್ಯು ಬ್ಯಾಂಕ್ ಶೇಕಡಾ 3.40 ರಷ್ಟು ಏರಿಕೆಯೊಂದಿಗೆ ಮುನ್ನಡೆ ಸಾಧಿಸಿದರೆ, ನಿಫ್ಟಿ ರಿಯಾಲ್ಟಿ, ನಿಫ್ಟಿ ತೈಲ ಮತ್ತು ಅನಿಲ, ನಿಫ್ಟಿ ಆಟೋ ಮತ್ತು ನಿಫ್ಟಿ ಕನ್ಸೂಮರ್ ಡ್ಯೂರೇಬಲ್ಸ್ ಶೇಕಡಾ 1.3 ರಿಂದ 2.5 ರಷ್ಟು ಲಾಭವನ್ನು ದಾಖಲಿಸಿವೆ.
ನಿಫ್ಟಿ 50 ಯ 50 ಘಟಕ ಷೇರುಗಳ ಪೈಕಿ 34 ಏರಿಕೆಯೊಂದಿಗೆ ಕೊನೆಗೊಂಡವು. ಬಜಾಜ್ ಆಟೋ ಶೇ 3.7ರಷ್ಟು ಏರಿಕೆ ಕಂಡರೆ, ಮಹೀಂದ್ರಾ ಅಂಡ್ ಮಹೀಂದ್ರಾ, ಒಎನ್ ಜಿಸಿ, ಹೀರೋ ಮೋಟೊಕಾರ್ಪ್, ಎಸ್ ಬಿಐ ಲೈಫ್ ಇನ್ಶೂರೆನ್ಸ್, ಎಸ್ ಬಿಐ, ಎಚ್ ಡಿಎಫ್ ಸಿ ಲೈಫ್ ಇನ್ಶೂರೆನ್ಸ್, ಏರ್ ಟೆಲ್, ಬಿಪಿಸಿಎಲ್ ಮತ್ತು ಕೋಲ್ ಇಂಡಿಯಾ ಶೇ 2 ರಿಂದ ಶೇ 3.3 ರಷ್ಟು ಲಾಭ ಗಳಿಸಿವೆ.
ಡಾಲರ್ ವಿರುದ್ಧ ರೂಪಾಯಿ ಕುಸಿತ:ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಬಲವರ್ಧನೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯಿಂದಾಗಿ ರೂಪಾಯಿ ಸೋಮವಾರ ಯುಎಸ್ ಕರೆನ್ಸಿ ವಿರುದ್ಧ 1 ಪೈಸೆ ಕುಸಿದು 83.53 ರಲ್ಲಿ (ತಾತ್ಕಾಲಿಕ) ಕೊನೆಗೊಂಡಿತು. ವಹಿವಾಟಿನ ಒಂದು ಹಂತದಲ್ಲಿ ಡಾಲರ್ ಎದುರು ರೂಪಾಯಿ 8 ಪೈಸೆ ಏರಿಕೆ ಕಂಡು 83.44 ರೂಪಾಯಿಗಳಿಗೆ ತಲುಪಿತ್ತು. ಆದರೆ ಅಂತಿಮವಾಗಿ ಯುಎಸ್ ಡಾಲರ್ ಎದುರು ರೂಪಾಯಿ 83.53 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 1 ಪೈಸೆ ಕಡಿಮೆಯಾಗಿದೆ.
ಅಂತಾರಾಷ್ಟ್ರೀಯ ತೈಲ ಬೆಲೆಗಳ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಫ್ಯೂಚರ್ಸ್ ವಹಿವಾಟಿನಲ್ಲಿ ಬ್ಯಾರೆಲ್ಗೆ ಶೇಕಡಾ 0.26 ರಷ್ಟು ಏರಿಕೆಯಾಗಿ 74.68 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : ಜುಲೈನಲ್ಲಿ ಇಪಿಎಫ್ಗೆ 19.94 ಲಕ್ಷ ಸದಸ್ಯರ ಸೇರ್ಪಡೆ: 10.52 ಲಕ್ಷ ಹೊಸ ಉದ್ಯೋಗಿಗಳ ನೋಂದಣಿ - EPFO members