ಮುಂಬೈ: ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿ 50 ಬುಧವಾರ ತನ್ನ ಸತತ 14 ದಿನಗಳ ಏರಿಕೆಯ ಓಟವನ್ನು ಕೊನೆಗೊಳಿಸಿತು. ಬುಧವಾರದಂದು ಬಿಎಸ್ಇ ಸೆನ್ಸೆಕ್ಸ್ 202.80 ಪಾಯಿಂಟ್ಸ್ ಅಥವಾ ಶೇಕಡಾ 0.25 ರಷ್ಟು ಕುಸಿದು 82,352.64 ರಲ್ಲಿ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ50 81.15 ಪಾಯಿಂಟ್ಸ್ ಅಥವಾ ಶೇಕಡಾ 0.33 ರಷ್ಟು ಕುಸಿದು 25,198.70 ರಲ್ಲಿ ಕೊನೆಗೊಂಡಿದೆ.
ನಿಫ್ಟಿ 50ಯಲ್ಲಿ 31 ಷೇರುಗಳಲ್ಲಿ ಕುಸಿತ:ನಿಫ್ಟಿ ಫಿಫ್ಟಿಯ 50 ಘಟಕ ಷೇರುಗಳ ಪೈಕಿ 31 ಷೇರುಗಳು ಕುಸಿದವು. ವಿಪ್ರೋ, ಕೋಲ್ ಇಂಡಿಯಾ, ಒಎನ್ಜಿಸಿ, ಹಿಂಡಾಲ್ಕೊ ಮತ್ತು ಎಲ್ ಟಿಐ ಷೇರುಗಳು ಶೇಕಡಾ 3.05 ರಷ್ಟು ನಷ್ಟ ಅನುಭವಿಸಿದವು.
ಈ ಷೇರುಗಳಿಗೆ ಲಾಭ:ಏತನ್ಮಧ್ಯೆ, ಏಷ್ಯನ್ ಪೇಂಟ್ಸ್, ಗ್ರಾಸಿಮ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯೂನಿಲಿವರ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಸನ್ ಫಾರ್ಮಾ ಶೇಕಡಾ 2.50 ರಷ್ಟು ಲಾಭ ಗಳಿಸಿದವು.
ಬಿಎಸ್ಇ ಸೆನ್ಸೆಕ್ಸ್ನಲ್ಲಿ ಲಿಸ್ಟ್ ಆಗಿರುವ 30 ಷೇರುಗಳ ಪೈಕಿ 19 ಷೇರುಗಳು ಕುಸಿದವು. ಮಹೀಂದ್ರಾ & ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಕ್ಸಿಸ್ ಬ್ಯಾಂಕ್ ಶೇಕಡಾ 1.29 ರಷ್ಟು ಕುಸಿದವು. ಏಷ್ಯನ್ ಪೇಂಟ್ಸ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಸೇರಿದಂತೆ 11 ಷೇರುಗಳು ಶೇಕಡಾ 2.39 ರಷ್ಟು ಲಾಭದೊಂದಿಗೆ ಕೊನೆಗೊಂಡವು.
ಆಯ್ದ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳನ್ನು ಹೊರತುಪಡಿಸಿ ವಿಶಾಲ ಸೂಚ್ಯಂಕಗಳು ಸಹ ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿ ಸ್ಮಾಲ್ ಕ್ಯಾಪ್ ಸೂಚ್ಯಂಕವು ಇಂಟ್ರಾ-ಡೇ ವ್ಯವಹಾರಗಳಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿತು. ಆದಾಗ್ಯೂ ನಂತರ ಅದು ಫ್ಲ್ಯಾಟ್ ಆಗಿ ಕೊನೆಗೊಂಡಿತು.
ವಲಯ ಸೂಚ್ಯಂಕಗಳಲ್ಲಿ, ಐಟಿ, ಪಿಎಸ್ ಯು ಬ್ಯಾಂಕ್, ಆಟೋ, ಹಣಕಾಸು ಸೇವೆಗಳು ಮತ್ತು ಲೋಹವು ಶೇಕಡಾ 1.69 ರಷ್ಟು ಕುಸಿತ ಕಂಡರೆ, ಎಫ್ಎಂಸಿಜಿ, ಫಾರ್ಮಾ, ಮಾಧ್ಯಮ, ರಿಯಾಲ್ಟಿ ಮತ್ತು ಹೆಲ್ತ್ ಕೇರ್ ಶೇಕಡಾ 1.09 ರಷ್ಟು ಲಾಭ ಗಳಿಸಿದವು. ನಿಫ್ಟಿ ಐಟಿ ಸೂಚ್ಯಂಕವು ಸತತ ಎರಡನೇ ದಿನ ಕುಸಿದಿದೆ. ಮುಖ್ಯವಾಗಿ ವಿಪ್ರೋ ಷೇರುಗಳು ಹೆಚ್ಚು ಕುಸಿದವು. ಏತನ್ಮಧ್ಯೆ, ನಿಫ್ಟಿ ಪಿಎಸ್ ಯು ಬ್ಯಾಂಕ್ ಸೂಚ್ಯಂಕ ಕೂಡ ಕುಸಿದಿದೆ.
ದೇಶೀಯ ಈಕ್ವಿಟಿ ಮಾರುಕಟ್ಟೆಗಳಲ್ಲಿ ತೀವ್ರ ಕುಸಿತದ ಮಧ್ಯೆ ಭಾರತೀಯ ರೂಪಾಯಿ ಬುಧವಾರ 4 ಪೈಸೆ ಕುಸಿದು 84.02 ಕ್ಕೆ (ತಾತ್ಕಾಲಿಕ) ಕೊನೆಗೊಂಡಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ 83.96 ರಲ್ಲಿ ಪ್ರಾರಂಭವಾಯಿತು ಮತ್ತು ದಿನದ ಅವಧಿಯಲ್ಲಿ 83.95 ರಿಂದ 84.01 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ರೂಪಾಯಿ ವಹಿವಾಟಿನ ಸಮಯದ ಕೊನೆಯಲ್ಲಿ ಕುಸಿದು 84.02 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯದ 83.98 ಕ್ಕಿಂತ 4 ಪೈಸೆ ಕಡಿಮೆಯಾಗಿದೆ.
ಇದನ್ನೂ ಓದಿ: ಉತ್ತಮ ಮುಂಗಾರು: ಭತ್ತ, ಧಾನ್ಯ, ಕಬ್ಬು ಬಿತ್ತನೆ ಪ್ರಮಾಣ ಹೆಚ್ಚಳ - Monsoon Boosts Paddy Sowing