ನವದೆಹಲಿ: 2024ರ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್ಫೋನ್ ಮಾರಾಟ ಶೇಕಡಾ 8ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದೆ. ಸ್ಮಾರ್ಟ್ಫೋನ್ ಮಾರಾಟದಲ್ಲಿ ಸ್ಯಾಮ್ಸಂಗ್ ಜಾಗತಿಕವಾಗಿ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಶೇಕಡಾ 19ರಷ್ಟು ಮಾರುಕಟ್ಟೆ ಪಾಲು ಹೊಂದಿದೆ ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಜಾಗತಿಕವಾಗಿ ಸ್ಮಾರ್ಟ್ಫೋನ್ ಮಾರುಕಟ್ಟೆಯ ಆದಾಯ ಕೂಡ ಶೇಕಡಾ 8ರಷ್ಟು ಏರಿಕೆಯಾಗಿದ್ದು, ಸ್ಮಾರ್ಟ್ಫೋನ್ಗಳ ಸರಾಸರಿ ಮಾರಾಟ ಬೆಲೆ (ಎಎಸ್ಪಿ) ಸಹ ಎರಡನೇ ತ್ರೈಮಾಸಿಕದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದು ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸತತ ಮೂರನೇ ತ್ರೈಮಾಸಿಕದ ಬೆಳವಣಿಗೆಯಾಗಿದೆ.
ಯುರೋಪ್ ಮತ್ತು ಏಷ್ಯಾ ಪೆಸಿಫಿಕ್ ದೇಶಗಳಲ್ಲಿ ಸ್ಮಾರ್ಟ್ಫೋನ್ಗಳ ಮಾರಾಟ ಎರಡಂಕಿ ಬೆಳವಣಿಗೆಯನ್ನು ದಾಖಲಿಸಿದೆ. ಆದಾಗ್ಯೂ, ಬೇಸಿಗೆಯಲ್ಲಿ ತೀವ್ರ ಬಿಸಿಗಾಳಿಯ ಹೊಡೆತಕ್ಕೆ ಸಿಲುಕಿದ್ದ ಭಾರತದಲ್ಲಿ ಸ್ಮಾರ್ಟ್ಫೋನ್ಗಳ ಮಾರಾಟ ಅಲ್ಪ ಕುಸಿತವಾಗಿದೆ ಎಂದು ಹಿರಿಯ ವಿಶ್ಲೇಷಕ ಪ್ರಾಚಿರ್ ಸಿಂಗ್ ಹೇಳಿದ್ದಾರೆ.
ಭಾರತ ಸೇರಿದಂತೆ ಏಷ್ಯಾ ಪೆಸಿಫಿಕ್ (ಎಪಿಎಸಿ) ವಲಯವು ಮಾರಾಟದ ಪ್ರಮಾಣದಲ್ಲಿ ಶೇಕಡಾ 14ರಷ್ಟು ಹೆಚ್ಚಳದೊಂದಿಗೆ (ವರ್ಷದಿಂದ ವರ್ಷಕ್ಕೆ) ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಾಗಿ ಮುಂದುವರೆದಿದೆ.