ಮುಂಬೈ: ಜೂನ್ ತ್ರೈಮಾಸಿಕದಲ್ಲಿ ಚಿಲ್ಲರೆ ಸಾಲ (retail credit) ಬಟವಾಡೆಗಳು ನಿಧಾನಗತಿಯಲ್ಲಿ ಬೆಳವಣಿಗೆಯಾಗಿವೆ ಎಂದು ವರದಿಯೊಂದು ಸೋಮವಾರ ತಿಳಿಸಿದೆ. ಹಣಕಾಸು ಸಂಸ್ಥೆಗಳು ಸಾಲದ ಪೂರೈಕೆಯನ್ನು ಬಿಗಿಗೊಳಿಸಿದ್ದರಿಂದ, ವಿಶೇಷವಾಗಿ ಕ್ರೆಡಿಟ್ ಕಾರ್ಡ್ ಗಳು, ಗ್ರಾಹಕ ಬಾಳಿಕೆ ಬರುವ ವಸ್ತುಗಳ ಮೇಲಿನ ಸಾಲಗಳು ಮತ್ತು ವೈಯಕ್ತಿಕ ಸಾಲಗಳಂತಹ ಬಳಕೆ ಆಧಾರಿತ ಉತ್ಪನ್ನಗಳ ಚಿಲ್ಲರೆ ಸಾಲದ ಬೆಳವಣಿಗೆಯು ಜೂನ್ ತ್ರೈಮಾಸಿಕದಲ್ಲಿ ಇಳಿಮುಖವಾಗಿದೆ ಎಂದು ವರದಿ ಹೇಳಿದೆ.
ನಿರಂತರ ಕುಸಿತ:ಟ್ರಾನ್ಸ್ ಯೂನಿಯನ್ ಸಿಬಿಲ್ ಕ್ರೆಡಿಟ್ ಮಾರ್ಕೆಟ್ ಇಂಡಿಕೇಟರ್ (ಸಿಎಂಐ) 1 ವರದಿಯು "ವಿಶೇಷವಾಗಿ ಯುವ ಗ್ರಾಹಕರು ಮೊದಲ ಬಾರಿಗೆ ಸಾಲ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ನ್ಯೂ-ಟು-ಕ್ರೆಡಿಟ್ (ಎನ್ ಟಿಸಿ) ಪರಿಮಾಣಗಳಲ್ಲಿ ನಿರಂತರ ಕುಸಿತ ಕಂಡುಬಂದಿದೆ" ಎಂದು ಹೇಳಿದೆ.
ಕಳೆದ ಐದು ವರ್ಷಗಳಲ್ಲಿ ಎನ್ ಟಿಸಿ ಗ್ರಾಹಕರಿಗೆ ನೀಡಲಾದ ಸಾಲಗಳ ಪ್ರಮಾಣ ಸ್ಥಿರವಾಗಿ ಕುಸಿದಿದೆ. ಚಿಲ್ಲರೆ ಸಾಲಗಳಲ್ಲಿ ಎನ್ಟಿಸಿ ಗ್ರಾಹಕರ ಪಾಲು ಜೂನ್ 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 16 ರಿಂದ ಜೂನ್ ತ್ರೈಮಾಸಿಕದಲ್ಲಿ ಶೇಕಡಾ 12ಕ್ಕೆ ಇಳಿದಿದೆ. ಒಟ್ಟಾರೆ ಸಾಲ ಬಟವಾಡೆ ಪ್ರಮಾಣವು ಮಧ್ಯಮ ದರದಲ್ಲಿ ಬೆಳೆಯುತ್ತಿದೆ. ಗೃಹ ಸಾಲಗಳು ಶೇಕಡಾ 9ರಷ್ಟು ಕುಸಿದಿದೆ ಮತ್ತು ಕ್ರೆಡಿಟ್ ಕಾರ್ಡ್ ಸಾಲಗಳು ಶೇಕಡಾ 30 ರಷ್ಟು ಕುಸಿದಿವೆ ಎಂದು ವರದಿ ತೋರಿಸಿದೆ. ದ್ವಿಚಕ್ರ ವಾಹನ ಸಾಲವು ಪರಿಮಾಣ ಮತ್ತು ಮೌಲ್ಯದಲ್ಲಿ ಎರಡಂಕಿ ಬೆಳವಣಿಗೆಯನ್ನು ಹೊಂದಿರುವ ಏಕೈಕ ಸಾಲ ಉತ್ಪನ್ನವಾಗಿದೆ.