ಕರ್ನಾಟಕ

karnataka

ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್​ ಆದ ಪತಂಜಲಿ ಸೋನ್​ ಪಾಪ್ಡಿ; ಮ್ಯಾನೇಜರ್​ ಸೇರಿ ಇತರರಿಗೆ 6 ತಿಂಗಳು ಜೈಲು - Patanjali Navratna Soan Papdi

By ETV Bharat Karnataka Team

Published : May 20, 2024, 11:09 AM IST

2019ರಲ್ಲಿ ಪಿಥೋರಗಢ್‌ನ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಮಾದರಿ ಸಂಗ್ರಹ ಮಾಡಿದ್ದು, ಇದು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ.

Patanjali Navratna Elaichi Soan Papdi failed the quality test
Patanjali Navratna Elaichi Soan Papdi failed the quality test (ANI Photo)

ನವದೆಹಲಿ:ಯೋಗ ಗುರು ರಾಮ್​ದೇವ್​ ಬಾಬಾ ಅವರ ಆಯುರ್ವೇದಿಕ್​ ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗುತ್ತಿದ್ದು, ಇದರಿಂದಾಗಿ ಪತಂಜಲಿ ಸಂಸ್ಥೆ ಸಮಸ್ಯೆ ಎದುರಿಸುವಂತೆ ಆಗಿದೆ. ಇದೀಗ ಉತ್ಪನ್ನಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಸಂಸ್ಥೆಯ ಅಧಿಕಾರಿ, ವಿತರಕರು ಮತ್ತು ಅಂಗಡಿ ವ್ಯಕ್ತಿ ಸೇರಿದಂತೆ ಆರೋಪಿಗಳಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.

ಪತಂಜಲಿ ನವರತ್ನ ಇಲಾಚಿ ಸೋನ್​ ಪಾಪ್ಡಿ ಉತ್ಪನ್ನವೂ ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್​ ಆಗಿದೆ. ಬೆರಿನಾಗ್ ಮಾರುಕಟ್ಟೆಯ ಅಂಗಡಿಯಿಂದ 2019ರಲ್ಲಿ ಪಿಥೋರಗಢ್‌ನ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಮಾದರಿ ಸಂಗ್ರಹ ಮಾಡಿದ್ದರು. ಇದು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿತ್ತು.

ಕಳೆದೆರಡು ದಿನಗಳ ಹಿಂದೆ (ಮೇ 18ರಂದು) ಈ ಪ್ರಕರಣ ಸಂಬಂಧ ಪಿಥೋರಗಢದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು, ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹಾಯಕ ಜನರಲ್ ಮ್ಯಾನೇಜರ್ ಮತ್ತು ವಿತರಕ ಅಭಿಷೇಕ್ ಕುಮಾರ್, ಅಂಗಡಿಯ ಲೀಲಾಧರ್ ಪಾಠಕ್ ಮತ್ತು ಕನ್ಹಾಜಿಯ ಸಹಾಯಕ ವ್ಯವಸ್ಥಾಪಕ ಅಜಯ್ ಜೋಶಿ ಎಂಬುವವರಿಗೆ ಆರು ತಿಂಗಳ ದಂಡ ಸಹಿತ ಶಿಕ್ಷೆ ವಿಧಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.

ಏನಿದು ಪ್ರಕರಣ: ಈ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ನೀಡಿದ ಪಿಥೋರಗಢ ಆಹಾರ ಸುರಕ್ಷತಾ ಅಧಿಕಾರಿ ರಾಜೇಶ್ ಶರ್ಮಾ, ಸೆಪ್ಟೆಂಬರ್ 17, 2019 ರಂದು ಬೆರಿನಾಗ್ ಮಾರ್ಕೆಟ್‌ನಲ್ಲಿರುವ ಲೀಲಾಧರ್ ಪಾಠಕ್ ಅವರ ಅಂಗಡಿಯಿಂದ ಪತಂಜಲಿ ನವರತ್ನ ಎಲೈಚಿ ಸೋನ್​ ಪಾಪ್ಡಿಯನ್ನು ಮಾದರಿ ಪರೀಕ್ಷೆಗೆ ಪಡೆಯಲಾಗಿತ್ತು. ಉಧಮ್ ಸಿಂಗ್ ನಗರದ ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದು, 2020ರಲ್ಲಿ ಪರೀಕ್ಷಿಸಿದ ನಂತರ ಬಳಕೆಗೆ ಉತ್ಪನ್ನವು ಅಸುರಕ್ಷಿತವೆಂದು ತಿಳಿದು ಬಂದಿತ್ತು.

ಗಾಜಿಯಾಬಾದ್‌ನಲ್ಲಿರುವ ಸೆಂಟ್ರಲ್ ಲ್ಯಾಬ್‌ನಲ್ಲಿ ಈ ಉತ್ಪನ್ನದ ಮಾದರಿಯನ್ನು ಮರು ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕೂಡ ಇದು ಅಸುರಕ್ಷಿತ ಎಂಬ ವರದಿ ಬಂದಿತು. ಈ ಹಿನ್ನೆಲೆ ವಿತರಕರಾದ ಲೀಲಾಧರ್​​ ಅಜಯ್ ಜೋಶಿ ಮತ್ತು ಪತಂಜಲಿಯ ಅಭಿಷೇಕ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣ ವಿಚಾರಣೆಯನ್ನು ಶನಿವಾರ ನಡೆಸಲಾಗಿದ್ದು, ಈ ವೇಳೆ ಪಿಥೋರಗಢದ ನೂತನ ಮ್ಯಾಜಿಸ್ಟ್ರೇಟ್​ ಸಂಜಯ್ ಸಿಂಗ್ ಅವರ ನ್ಯಾಯಾಲಯವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಸೆಕ್ಷನ್ 59 ರ ಅಡಿಯಲ್ಲಿ ಮೂವರು ಆರೋಪಿಗಳಿಗೆ 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ. ಲೀಲಾಧರ್ ಪಾಠಕ್ ಮತ್ತು ಅಜಯ್ ಜೋಶಿ ಅವರಿಗೆ ಕ್ರಮವಾಗಿ 5,000 ಮತ್ತು 10,000 ರೂ. ಅಭಿಷೇಕ್ ಕುಮಾರ್ 25,000 ರೂ. ದಂಡ ವಿಧಿಸಿದ್ದಾರೆ.

ಇದನ್ನೂ ಓದಿ:ಪತಂಜಲಿ ಕೇಸ್: ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತೇವೆ-ರಾಮ್‌ದೇವ್; ನೀವು ಅಷ್ಟು ಮುಗ್ಧರಲ್ಲ-ಸುಪ್ರೀಂ ಕೋರ್ಟ್

ABOUT THE AUTHOR

...view details