ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಆಗಸ್ಟ್ ನಲ್ಲಿ ಒಟ್ಟು 1.82 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳಲ್ಲಿ ಮಾರಾಟವಾಗಿದ್ದ 1.89 ಲಕ್ಷ ಸಂಖ್ಯೆಗೆ ಹೋಲಿಸಿದರೆ ಮಾರಾಟವು ಸುಮಾರು ಶೇಕಡಾ 3.9 ರಷ್ಟು (ವರ್ಷದಿಂದ ವರ್ಷಕ್ಕೆ) ಕಡಿಮೆಯಾಗಿದೆ. ಕಂಪನಿಯ ಒಟ್ಟು ದೇಶೀಯ ಮಾರಾಟವು (ಪ್ರಯಾಣಿಕರ ವಾಹನಗಳು, ಲಘು ವಾಣಿಜ್ಯ ವಾಹನಗಳು ಮತ್ತು ಒಇಎಂ ಸೇರಿದಂತೆ) ಶೇಕಡಾ 5.3 ರಷ್ಟು ಇಳಿಕೆಯಾಗಿ ಸುಮಾರು 1.56 ಲಕ್ಷ ಕಾರುಗಳಿಗೆ ತಲುಪಿದೆ.
ಮಾರುತಿ ಸುಜುಕಿ ಕಂಪನಿಯು ಆಗಸ್ಟ್ ನಲ್ಲಿ ದೇಶದಿಂದ 26,003 ಸಂಖ್ಯೆಯ ಕಾರುಗಳನ್ನು ರಫ್ತು ಮಾಡಿದೆ. ಕಳೆದ ವರ್ಷ 24,614 ಕಾರುಗಳನ್ನು ರಫ್ತು ಮಾಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ, ಮಾರುತಿ ಸುಜುಕಿ ಇಂಡಿಯಾ ಒಟ್ಟು 8,78,691 ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 8,68,742 ಸಂಖ್ಯೆಯ ಕಾರುಗಳು ಮಾರಾಟವಾಗಿದ್ದವು.
ಮಾರುತಿ ಸುಜುಕಿ ಇಂಡಿಯಾ 1981 ರಲ್ಲಿ ಸ್ಥಾಪನೆಯಾಗಿತ್ತು. ಅದರ ಮುಂದಿನ ವರ್ಷ, 1982 ರಲ್ಲಿ ಭಾರತ ಸರ್ಕಾರ ಮತ್ತು ಜಪಾನ್ ನ ಪ್ರತಿಷ್ಠಿತ ಸುಜುಕಿ ಮೋಟಾರ್ ಕಾರ್ಪೊರೇಷನ್ (ಎಸ್ ಎಂಸಿ) ನಡುವೆ ಮಹತ್ವದ ಜಂಟಿ ಉದ್ಯಮ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸುಮಾರು ಎರಡು ದಶಕಗಳ ನಂತರ, 2002 ರ ಹೊತ್ತಿಗೆ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಎಸ್ ಎಂಸಿಯ ಅಂಗಸಂಸ್ಥೆಯಾಗಿ ಪರಿವರ್ತನೆಗೊಂಡಿತು.