ಬೆಂಗಳೂರು : ಆರ್. ಆರ್ ನಗರ ವಿಧಾನಸಭಾಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲೆ ಬುಧವಾರ ಮೊಟ್ಟೆ ದಾಳಿ ನಡೆಸಿದ್ದ ಆರೋಪಿಗಳಿಗೆ ಇಂದು ಜಾಮೀನು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆ ಅವರನ್ನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದರು.
ಶಾಸಕ ಮುನಿರತ್ನ ನೀಡಿದ ದೂರಿನ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ಅಶ್ವತ್ಥ್, ವಿಶ್ವಮೂರ್ತಿ ಹಾಗೂ ವಿಶ್ವ ಎಂಬುವರನ್ನ ಬಂಧಿಸಿ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 115, 118 ಹಾಗೂ 190ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ವಾದ-ಪ್ರತಿವಾದ ಆಲಿಸಿದ 3ನೇ ಎಸಿಎಂಎಂ ನ್ಯಾಯಾಲಯವು ಮೂವರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಆರೋಪಿಗಳಿಗೆ ತಲಾ 4,500 ಶ್ಯೂರಿಟಿ, 50 ಸಾವಿರ ಮೊತ್ತದ ಬಾಂಡ್ ಹಾಗೂ ನ್ಯಾಯಾಲಯ ವ್ಯಾಪ್ತಿ ಬಿಟ್ಟು ತೆರಳಕೂಡದು ಎಂದು ಷರತ್ತು ವಿಧಿಸಿರುವುದಾಗಿ ಆರೋಪಿಗಳ ಪರ ವಕೀಲರು ತಿಳಿಸಿದ್ದಾರೆ.
ಆರ್. ಆರ್ ನಗರ ವಿಧಾನಸಭಾಕ್ಷೇತ್ರದ ನಿವಾಸಿಗಳಾದ ಆರೋಪಿಗಳನ್ನು ಮುಂಜಾಗ್ರತ ಕ್ರಮವಾಗಿ ನಿನ್ನೆ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಇಂದು ತೀವ್ರ ವಿಚಾರಣೆಗೊಳಪಡಿಸಿದ್ದರು. ಕೃತ್ಯವೆಸಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ಕೃತ್ಯದ ಹಿಂದೆ ಪ್ರಭಾವಿ ರಾಜಕೀಯ ನಾಯಕರು ಇರುವ ಬಗ್ಗೆ ಅಲ್ಲಗೆಳೆದಿರುವ ಆರೋಪಿಗಳು, ಶಾಸಕರ ಮೇಲಿನ ಜಿದ್ದಿಗಾಗಿ ಮೊಟ್ಟೆ ದಾಳಿ ನಡೆಸಲಾಗಿದೆ ಎಂದು ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಟ್ಟೆ ಚೂರು ಸ್ಯಾಂಪಲ್ ಸಂಗ್ರಹಿಸಿದ ಎಫ್ಎಸ್ಎಲ್ ತಂಡ : ವಾಜಪೇಯಿ ಜನ್ಮ (ಡಿ.25) ಶತಮಾನೋತ್ಸವ ಹಿನ್ನೆಲೆ ಲಕ್ಷ್ಮಿದೇವಿನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ಮುನಿರತ್ನ ಹಿಂತಿರುಗುವಾಗ ಮೊಟ್ಟೆ ದಾಳಿಯಾಗಿದ್ದ ಸ್ಥಳಕ್ಕೆ ಇಂದು ನಂದಿನಿ ಲೇಔಟ್ ಪೊಲೀಸರು ತೆರಳಿ ಮಹಜರು ಮಾಡಿದರು. ಸ್ಥಳಕ್ಕೆ ಧಾವಿಸಿದ ಎಫ್ಎಸ್ಎಲ್ ತಂಡವು ತಪಾಸಣೆ ನಡೆಸಿತು. ಸ್ಥಳದಲ್ಲಿ ಬಿದ್ದಿದ್ದ ಮೊಟ್ಟೆ ಚೂರು ಹಾಗೂ ಆ್ಯಸಿಡ್ ಅಂಶದ ಬಗ್ಗೆ ತಲಾಶ್ ನಡೆಸಿದರು. ಸಂಗ್ರಹಿಸಿದ ಸ್ಯಾಂಪಲ್ಗಳಲ್ಲಿ ಆ್ಯಸಿಡ್ ಒಳಗೊಂಡಂತೆ ಇನ್ನಿತರ ಕೆಮಿಕಲ್ ಇರಬಹುದಾ? ಎಂಬುದರ ಬಗ್ಗೆ ತಂಡವು ಪರಿಶೀಲಿಸಲಿದೆ.
ಮುನಿರತ್ನ ನೀಡಿದ ದೂರಿನಲ್ಲಿ ಏನಿದೆ ? ''ನನ್ನ ವಿರುದ್ಧ ಕೊಲೆಸಂಚು ನಡೆಯುತ್ತಿದೆ ಎಂಬುದರ ಬಗ್ಗೆ ಎರಡು ತಿಂಗಳ ಹಿಂದೆ ರಾಜ್ಯಪಾಲರನ್ನ ಭೇಟಿಯಾಗಿ ದೂರು ನೀಡಿದ್ದೆ. ಹಾಲಿ ಶಾಸಕನಾಗಿದ್ದು, ಗನ್ ಮ್ಯಾನ್ ನೀಡುವಂತೆ ರಾಜ್ಯಗುಪ್ತವಾರ್ತೆಯ ಎಡಿಜಿಪಿ ಹೇಮಂತ್ ನಿಂಬಾಳ್ಕರ್ಗೆ ಪತ್ರ ಬರೆದಿದ್ದೆ. ಡಿ. 5ರಂದು ಸಿವಿಲ್ ಕೋರ್ಟ್ ಬಳಿ ವಕೀಲರ ರೂಪದಲ್ಲಿ ಬಂದ ಇಬ್ಬರು ಆಗಂತುಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡು, ಇಲ್ಲವಾದರೆ ಪೋಕ್ಸೊ ಪ್ರಕರಣದಲ್ಲಿ ಮತ್ತೆ ಜೈಲಿಗೆ ಕಳುಹಿಸುತ್ತೇವೆ. ನಮ್ಮ ಅಣ್ಣ ಡಿ. ಕೆ ಸುರೇಶ್ ಸಂತೋಷವಾಗಿರಬೇಕು. ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅವರನ್ನ 1 ಲಕ್ಷ ಮತಗಳಿಂದ ಸೋಲಿಸಿರುವೆ. ಇದರಿಂದ ಸುರೇಶ್ ಅವರು ನೊಂದಿದ್ದಾರೆ'' ಎಂದು ಹೇಳಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಆರ್. ಆರ್ ನಗರಕ್ಕೆ ಕುಸುಮಾ ಅವರು ಶಾಸಕರಾಗಬೇಕು. ಮುಂದಿನ ದಿನಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ರೀತಿ ಸಚಿವೆಯಾಗಬೇಕು. ನೀನು ರಾಜೀನಾಮೆ ಕೊಟ್ಟರೆ ನಿನ್ನ ಜೀವ ಉಳಿಯುತ್ತದೆ. ಇಲ್ಲದಿದ್ದರೆ 100 ರಿಂದ 150 ಜನರನ್ನ ಸೇರಿಸಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಆ್ಯಸಿಡ್ ಮೊಟ್ಟೆ ದಾಳಿ ನಡೆಸಲಾಗುವುದು ಎಂದು ಬೆದರಿಸಿದ್ದಾರೆ.
ಈ ಸಂಬಂಧ ಆಪ್ತ ಸಹಾಯಕನ ಮೂಲಕ ರಾಷ್ಟ್ರಪತಿ, ಪ್ರಧಾನಿ, ಕೇಂದ್ರದ ಸಚಿವರಿಗೆ ಹಾಗೂ ಎನ್ಐಎ ಹಾಗೂ ಇ.ಡಿಗೆ ದೂರು ನೀಡಿದ್ದೇನೆ. ನಿನ್ನೆ ಲಕ್ಷ್ಮಿದೇವಿನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಹಲ್ಲೆಗೆ ಯತ್ನಿಸಲಾಗಿತ್ತು. ಲಗ್ಗೆರೆಯ ಮೆಡಿಕಲ್ ಕ್ಯಾಂಪ್ನಲ್ಲಿ ನನ್ನ ಕೊಲೆಗೆ ಸಂಚು ರೂಪಿಸಿದ್ದರು ಎಂದು ಮುನಿರತ್ನ ಅವರು ಆರೋಪಿಸಿದ್ದಾರೆ.
ನಿನ್ನೆ ಲಕ್ಷ್ಮಿದೇವಿನಗರದ ಬಿಜೆಪಿ ಕಚೇರಿಯಲ್ಲಿ ವಾಜಪೇಯಿ ಅವರ ಜನ್ಮಶತಮಾನೋತ್ಸವದಲ್ಲಿ ಭಾಗವಹಿಸಿ ವಾಪಸ್ ಬರುವಾಗ ಆ್ಯಸಿಡ್ ಮೊಟ್ಟೆ ದಾಳಿಯಾಗಿತ್ತು. ತನ್ನ ತಲೆಗೆ ಪೆಟ್ಟು ಬಿದ್ದು ಉರಿಯೂತವಾಗಿದೆ. ಸುಮಾರು 100 ರಿಂದ 150 ಮಂದಿ ಜನರು ಗುಂಪು ಸೇರಿ ಬಂದಿದ್ದರು ಎಂದು ದೂರಿನಲ್ಲಿ ಮುನಿರತ್ನ ಅವರು ವಿವರಿಸಿದ್ದಾರೆ.
ಮುನಿರತ್ನ ವಿರುದ್ಧ ಪ್ರತಿದೂರು : ಶಾಸಕ ಮುನಿರತ್ನ ದೂರು ನೀಡುತ್ತಿದ್ದಂತೆ ಕೆ. ವಿಶ್ವಮೂರ್ತಿ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ವೈಯಕ್ತಿಕ ಕೆಲಸ ನಿಮಿತ್ತ ಘಟನೆ ನಡೆದ ಲಕ್ಷ್ಮಿದೇವಿನಗರದ ರಿಂಗ್ ರಸ್ತೆ ಮಾರ್ಗವಾಗಿ ಹೋಗುವಾಗ ಏಕಾಏಕಿ ಮುನಿರತ್ನ ಪರ ಬೆಂಬಲಿಗರು ಸೇರಿ ಹಲ್ಲೆ ಮಾಡಿದ್ದಾರೆ. ಶಾಸಕರ ವಿರುದ್ಧ ಪ್ರತಿಭಟನೆ ಮಾಡುತ್ತಿಯಾ? ಎಂದು ಏರುಧ್ವನಿಯಲ್ಲಿ ಹೇಳಿ ಮನಸೋಇಚ್ಛೆ ಥಳಿಸಿದ್ದಾರೆ. ತನ್ನ ಮೇಲೆ ಸುಮಾರು 10 ರಿಂದ 15 ಮಂದಿ ಹಲ್ಲೆ ನಡೆಸಿದ್ದು, ಅವರನ್ನ ಬಂಧಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ: ಎಫ್ಐಆರ್ ದಾಖಲು - EGG THROWN AT MLA MUNIRATHNA