ಬೆಂಗಳೂರು: ರಜೆ ಪಡೆಯದೆ ಉದ್ಯೋಗಕ್ಕೆ ಗೈರಾಗುವುದು ದುರ್ನತಡೆಯಾಗಲಿದೆ. ಶಿಸ್ತು ಕ್ರಮ ಜರುಗಿಸಲು ಅರ್ಹವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಉದ್ಯೋಗಿಯ ಅನಧಿಕೃತ ರಜೆಯನ್ನು ಕಾರ್ಮಿಕ ನ್ಯಾಯಾಲಯಗಳು ಲಘುವಾಗಿ ಪರಿಗಣಿಸಬಾರದು ಎಂದು ತಿಳಿಸಿದೆ.
ಜೊತೆಗೆ, ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾದ ಹಿನ್ನೆಲೆಯಲ್ಲಿ ಚಾಲಕ ಕಂ. ನಿರ್ವಾಹನೋರ್ವನನ್ನು ಸೇವೆಯಿಂದ ವಜಾಗೊಳಿಸಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಆದೇಶವನ್ನು ಎತ್ತಿಹಿಡಿದಿದೆ.
ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾದ ಹಿನ್ನೆಲೆಯಲ್ಲಿ ಚಾಲಕ ಕಂ. ನಿರ್ವಾಹಕ ಹುದ್ದೆಯಿಂದ ರಾಯಚೂರಿನ ಟಿ. ದೇವಪ್ಪ ಅವರನ್ನು ವಜಾಗೊಳಿಸಿದ್ದ ಕ್ರಮವನ್ನು ರದ್ದುಪಡಿಸಿದ್ದ ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ, ಉದ್ಯೋಗಕ್ಕೆ ಹಾಜರಾಗಬೇಕಾದ ಸಮಯದಲ್ಲಿ ಸಕಾರಣವಿಲ್ಲದೆ ಗೈರಾಗಬಾರದು ಎಂಬ ಹೊಣೆಗಾರಿಕೆ ಉದ್ಯೋಗಿಯ ಮೇಲಿರುತ್ತದೆ. ಔದ್ಯೋಗಿಕ ಕ್ಷೇತ್ರದಲ್ಲಿ ರಜೆ ಮಂಜೂರಾಗದೆ ಗೈರಾಗುವುದು ದುರ್ನಡತೆಯಾಗಲಿದೆ. ಅದು ಶಿಸ್ತು ಕ್ರಮ ಜರುಗಿಸಲು ಅರ್ಹವಾಗಿರುತ್ತದೆ. ರಜೆ ಮಂಜೂರಾಗದೆ ಗೈರಾಗುವುದನ್ನು ಹಕ್ಕು ಎಂಬುದಾಗಿ ಉದ್ಯೋಗಿಗಳು ಪರಿಗಣಿಸಬಾರದು ಎಂದು ತಿಳಿಸಿದೆ.
ಅನಧಿಕೃತವಾಗಿ ಗೈರಾದ ತಪ್ಪಿತಸ್ಥ ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಸಮರ್ಥನೀಯವಾಗಿದೆ. ಈ ಪ್ರಕರಣದಲ್ಲಿ ರಜೆ ಕೋರಿ ಅರ್ಜಿ ಸಲ್ಲಿಸದೆ ಮತ್ತು ಉನ್ನತಾಧಿಕಾರಿಗಳ ಪೂರ್ವಾನುಮತಿಯಿಲ್ಲದೆ ಉದ್ಯೋಗಕ್ಕೆ ಅನಧಿಕೃತವಾಗಿ ಗೈರಾಗಿದ್ದರೂ ದೇವಪ್ಪನನ್ನು ಸೇವೆಯಿಂದ ಮರು ನಿಯೋಜಿಸಲು ಬಿಎಂಟಿಸಿಗೆ ನಿರ್ದೇಶಿಸಿದ ಕಾರ್ಮಿಕ ನ್ಯಾಯಾಲಯದ ಆದೇಶ ದೋಷಪೂರಿತವಾಗಿದೆ. ಉದ್ಯೋಗಿಗಳ ಅನಧಿಕೃತ ಗೈರನ್ನು ಕಾರ್ಮಿಕ ನ್ಯಾಯಾಲಯವು ಲಘುವಾಗಿ ಪರಿಗಣಿಸುವಂತಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸೂಚಿಸಿದೆ.
ಪ್ರಕರಣದ ಹಿನ್ನೆಲೆ; ಬಿಎಂಟಿಸಿಯಲ್ಲಿ ಚಾಲಕ ಕಂ. ನಿರ್ವಾಹಕರಾಗಿದ್ದ ದೇವಪ್ಪ 2017ರ ನ.24ರಿಂದ ರಜೆ ಮಂಜೂರಾಗದಿದ್ದರೂ ಮತ್ತು ಮೇಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿದ್ದರು. ಈ ಕುರಿತು ಡಿಫೋ ವ್ಯವಸ್ಥಾಪಕರು 2017ರ ಡಿಸೆಂಬರ್ 4ರಂದು ವರದಿ ಸಲ್ಲಿಸಿದ್ದರು. 2017ರ ಡಿ.9 ಮತ್ತು 2018ರ ಏ.13ರಂದು ದೇವಪ್ಪಗೆ ನೋಟಿಸ್ ನೀಡಿದ್ದ ಬಿಎಂಟಿಸಿ, ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿತ್ತು. ಆದರೂ ಕರ್ತವ್ಯಕ್ಕೆ ಹಾಜರಾಗದಕ್ಕೆ ಚಾರ್ಜ್ ಮೆಮೊ ನೀಡಲಾಗಿತ್ತು. ಅದಕ್ಕೂ ದೇವಪ್ಪ ಉತ್ತರಿಸಿರಲಿಲ್ಲ.
ಇದರಿಂದ ಬಿಎಂಟಿಸಿಯು ಶಿಸ್ತು ಪ್ರಾಧಿಕಾರವು ವಿಚಾರಣಾ ಅಧಿಕಾರಿಯನ್ನು ನಿಯೋಜಿಸಿತ್ತು.
ದೇವಪ್ಪ ಅವರು ವಿಚಾರಣಾಧಿಕಾರಿ ಮುಂದೆಯೂ ಹಾಜರಾಗಲಿರಲಿಲ್ಲ. ವಿಚಾರಣೆ ನಡೆಸಿದ್ದ ಅಧಿಕಾರಿ, ದೇವಪ್ಪ ಮೇಲಿನ ಆರೋಪ ಸಾಬೀತಾಗಿದೆ ಎಂದು ವರದಿ ಸಲ್ಲಿಸಿದ್ದರು. ಅದನ್ನು ಆಧರಿಸಿದ ಶಿಸ್ತುಕ್ರಮ ಪ್ರಾಧಿಕಾರವು ದೇವಪ್ಪನನ್ನು ಸೇವೆಯಿಂದ ವಜಾಗೊಳಿಸುವ ಮೂಲಕ ಶಿಕ್ಷೆ ನೀಡಿ 2020ರ ಆ.31ರಂದು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಕಾರ್ಮಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ದೇವಪ್ಪ, ತನಗೆ ಬೆನ್ನನೋವು ಕಾಡುತ್ತಿದ್ದ ಕಾರಣಕ್ಕೆ ಉದ್ಯೋಗಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದರು. ಅದನ್ನು ಒಪ್ಪಿದ್ದ ಕಾರ್ಮಿಕ ನ್ಯಾಯಾಲಯ, ಸೇವೆಯಿಂದ ವಜಾಗೊಂಡರೆ ದೇವಪ್ಪ ನಿರುದ್ಯೋಗಿಯಾಗುತ್ತಾರೆ. ಜೀವನ ನಡೆಸಲು ಮತ್ತು ಕುಟುಂಬವನ್ನು ನಿರ್ವಹಣೆ ಮಾಡಲು ಕಷ್ಟವಾಗುತ್ತದೆ ಎಂದು ಅನುಕಂಪ ತೋರಿಸಿ, ದೇವಪ್ಪನನ್ನು ಸೇವೆಗೆ ಮರು ನಿಯೋಜಿಸಲು ಬಿಎಂಟಿಸಿಗೆ ಸೂಚಿಸಿ 2023ರ ನ.29ರಂದು ಆದೇಶಿಸಿತ್ತು. ಇದರಿಂದ ಬಿಎಂಟಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: 'ಕನ್ನಡ ಭಾಷೆ, ನಾಡಗೀತೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ' ಸೇರಿ 2024ರಲ್ಲಿ ಹೈಕೋರ್ಟ್ ನೀಡಿದ ಅಭಿಪ್ರಾಯಗಳಿವು!
ಇದನ್ನೂ ಓದಿ: 'ರಾಜಕೀಯ ಪಕ್ಷಗಳ ವಿರುದ್ಧವೂ ಮಾನಹಾನಿ ಪ್ರಕರಣ': ರಾಜಕಾರಣಿಗಳ ಪ್ರಕರಣಗಳ ಬಗ್ಗೆ 2024ರಲ್ಲಿ ಹೈಕೋರ್ಟ್ ಆದೇಶಗಳು