ನವದೆಹಲಿ : ದೊಡ್ಡ ಪ್ರಮಾಣದ ಡಿಸ್ಕೌಂಟ್ಗಳನ್ನು ನೀಡುವ ಮೂಲಕ ಇ-ಕಾಮರ್ಸ್ ಕ್ಷೇತ್ರವು ಸಣ್ಣ ರಿಟೇಲರ್ಗಳ ಮಾರುಕಟ್ಟೆಯನ್ನು ನುಂಗಿ ಹಾಕುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕಳವಳ ವ್ಯಕ್ತಪಡಿಸಿದ್ದಾರೆ. ಇ-ಕಾಮರ್ಸ್ ಕಂಪನಿಗಳು ಮಾರುಕಟ್ಟೆಯನ್ನು ಲೂಟಿ ಮಾಡುವ ರೀತಿಯ ಬೆಲೆಯಲ್ಲಿ ವ್ಯವಹಾರ ಮಾಡುತ್ತಿವೆ ಮತ್ತು ಸಣ್ಣ ಚಿಲ್ಲರೆ ವ್ಯಾಪಾರಿಗಳಿಗೆ ಸಮಾನ ಅವಕಾಶವನ್ನು ನೀಡುತ್ತಿಲ್ಲ ಎಂದು ಗೋಯಲ್ ಆರೋಪಿಸಿದರು.
'ಭಾರತದಲ್ಲಿ ಉದ್ಯೋಗ ಮತ್ತು ಗ್ರಾಹಕ ಹಿತಾಸಕ್ತಿಯ ಮೇಲೆ ಇ-ಕಾಮರ್ಸ್ನ ಒಟ್ಟಾರೆ ಪರಿಣಾಮ' (Net Impact of E-Commerce on Employment and Consumer Welfare in India) ಕುರಿತಾದ ವರದಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
"ಇ-ಕಾಮರ್ಸ್ ವಲಯ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ಯಾವತ್ತಾದರೂ ಯೋಚಿಸಿದ್ದೆವೆಯೇ? ಅವರು ತುಂಬಾ ಸರಕುಗಳನ್ನು ತುಂಬಾ ಅಗ್ಗವಾಗಿ ಮಾರುತ್ತಿದ್ದಾರೆ. ನಾನು ಅಂಗಡಿಯೊಂದಕ್ಕೆ ಹೋಗಿ ಫೈವ್ ಸ್ಟಾರ್ ಚಾಕೊಲೇಟ್ ಅಥವಾ ಯಾವುದೋ ಒಂದು ಚಾಕೊಲೇಟ್ ಬಾಕ್ಸ್ ಖರೀದಿಸಿದರೆ, ನಾನು 500 ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ ಅಂದುಕೊಳ್ಳೋಣ. ಆದರೆ ಅದೇ ಸರಕನ್ನು ಇ-ಕಾಮರ್ಸ್ ಕೇವಲ 350 ರೂಪಾಯಿಗೆ ನನ್ನ ಮನೆಗೇ ತಲುಪಿಸುತ್ತದೆ. ಆ ಸರಕು ಬಹಳ ದೊಡ್ಡ ಮಾರ್ಜಿನ್ ಹೊಂದಿರುವುದೇ ಇದಕ್ಕೆ ಕಾರಣವಾಗಿದೆ. ಇ-ಕಾಮರ್ಸ್ ಹೆಚ್ಚಿನ ಮೌಲ್ಯದ, ಹೆಚ್ಚಿನ ಮಾರ್ಜಿನ್ ಹೊಂದಿದ ಉತ್ಪನ್ನಗಳಿಂದ ಲಾಭ ಮಾಡಿಕೊಳ್ಳುವ ಮೂಲಕ ಸಣ್ಣ ಚಿಲ್ಲರೆ ವ್ಯಾಪಾರಿಗಳನ್ನು ವ್ಯಾಪಾರವನ್ನು ದೋಚುತ್ತಿದೆ." ಎಂದು ಗೋಯಲ್ ಹೇಳಿದರು.
"ಇ-ಕಾಮರ್ಸ್ನ ಈ ಬೃಹತ್ ಬೆಳವಣಿಗೆಯಿಂದ ಸಾಮಾಜಿಕವಾಗಿ ಸಮಸ್ಯೆಗಳು ಎದುರಾಗಬಹುದಾ? ಇಂದಿನಿಂದ ಹತ್ತು ವರ್ಷಗಳ ನಂತರ ನಮ್ಮ ಮಾರುಕಟ್ಟೆಯ ಅರ್ಧದಷ್ಟು ಇ-ಕಾಮರ್ಸ್ ಜಾಲಕ್ಕೆ ಸೇರಿಕೊಳ್ಳುವುದು ಹೆಮ್ಮೆಯ ವಿಷಯವೆಂದು ನಾನು ಭಾವಿಸುವುದಿಲ್ಲ. ಹಾಗಂತ ಇ-ಕಾಮರ್ಸ್ ಕ್ಷೇತ್ರದ ಮಹತ್ವವನ್ನು ನಾನು ನಿರಾಕರಿಸುತ್ತಿಲ್ಲ" ಎಂದು ಸಚಿವರು ನುಡಿದರು.