ನವದೆಹಲಿ:ದಕ್ಷಿಣ ಕೊರಿಯಾದ ಪ್ರಸಿದ್ಧ ಕಾರು ತಯಾರಕ ಕಂಪನಿ ಹ್ಯುಂಡೈ, ಭಾರತೀಯ ಷೇರು ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದಕ್ಕಾಗಿ ಹ್ಯುಂಡೈ ಮೋಟಾರ್ ಇಂಡಿಯಾ ಅವಶ್ಯವಿರುವ ಪ್ರಾಥಮಿಕ ದಾಖಲೆಗಳನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸಲ್ಲಿಸಿದೆ. ಇದರೊಂದಿಗೆ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ವಿತರಣೆಗೆ ಅಣಿಯಾಗುತ್ತಿದೆ. ಈ ಕಂಪನಿಯ ಐಪಿಒ ಆರಂಭವಾದಲ್ಲಿ, ಇದು ದೇಶದ ಅತೀ ದೊಡ್ಡ ಐಪಿಒ ಆಗಲಿದೆ. ಏಕೆಂದರೆ, ಈ ಹಿಂದೆ ಭಾರತೀಯ ವಿಮಾ ನಿಗಮ (ಎಲ್‌ಐಸಿ) ತನ್ನ ಷೇರು ಮಾರಾಟದ ಮೂಲಕ ಸಂಗ್ರಹಿಸಿದ 21,000 ಕೋಟಿ ರೂಪಾಯಿಯನ್ನೂ ಇದು ಮೀರಲಿದೆ.
ಹ್ಯುಂಡೈ ಇಂಡಿಯಾ ಸಲ್ಲಿಸಿದ ದಾಖಲೆಯಂತೆ, ಕಂಪನಿಯು 142,194,700 ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿದೆ. ಈ ವರ್ಷದ ಫೆಬ್ರವರಿಯಲ್ಲಿ ಮೂಲಗಳು ಖಚಿತಪಡಿಸಿರುವಂತೆ, ಹ್ಯುಂಡೈ ಮೋಟಾರ್ ಕಂಪನಿ ಐಪಿಒ ಮೂಲಕ ಕನಿಷ್ಠ 3 ಬಿಲಿಯನ್ ಡಾಲರ್ (ಸುಮಾರು 25,000 ಕೋಟಿ ರೂ.) ಸಂಗ್ರಹಿಸಲು ನಿರ್ಧರಿಸಿದೆ.
ಹ್ಯುಂಡೈ ಭಾರತದ ಎರಡನೇ ಅತೀ ದೊಡ್ಡ ಕಾರು ತಯಾರಕಾ ಕಂಪನಿ. ಕಳೆದ ಎರಡು ದಶಕಗಳಲ್ಲಿ ಆಟೊಮೊಬೈಲ್ ಕಂಪನಿಯೊಂದು ಇದೇ ಮೊದಲ ಬಾರಿಗೆ ಷೇರು ಮಾರಾಟಕ್ಕೆ ಮುಂದಾಗಿದ್ದು, ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು. 2003ರಲ್ಲಿ ಮಾರುತಿ ಸುಜುಕಿ ಕಂಪೆನಿ ಷೇರು ಮಾರಾಟ ಮಾಡಿತ್ತು. ವಾರದ ಹಿಂದೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪೆನಿ ಓಲಾ ಎಲೆಕ್ಟ್ರಿಕ್ ಐಪಿಒ ಮೂಲಕ ಷೇರು ಮಾರಾಟ ಮಾಡಿ ನಿಧಿ ಸಂಗ್ರಹಿಸಲು ಸೆಬಿಯಿಂದ ಅನುಮತಿ ಪಡೆದಿತ್ತು.