ಜೈಸಲ್ಮೇರ್(ರಾಜಸ್ಥಾನ):ಬಳಸಿದ ವಿದ್ಯುತ್‌ಚಾಲಿತ ವಾಹನಗಳ (Used Electric Vehicles) ಮಾರಾಟದ ಮೇಲೆ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲು ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ವೇಳೆ, ವಿಮಾನ ಇಂಧನ (ATF) ಅನ್ನು 'ಒಂದು ದೇಶ ಒಂದು ತೆರಿಗೆ' ವ್ಯವಸ್ಥೆಯಿಂದ ಹೊರಗಿಡಲು ನಿರ್ಧರಿಸಲಾಯಿತು.
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 55ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯಿತು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪಾಪ್‌ಕಾರ್ನ್ ಬೆಲೆ ಹೆಚ್ಚಳ:ಕೆರಮಲೈಸ್ಡ್ (ಸಿಹಿಯಾದ) ಪಾಪ್‌ಕಾರ್ನ್‌ಗೆ ಶೇ.18ರಷ್ಟು ಜಿಎಸ್‌ಟಿ ಮುಂದುವರೆಯಲಿದೆ ಎಂದು ಜಿಎಸ್‌ಟಿ ಸಭೆ ಸ್ಪಷ್ಟಪಡಿಸಿತು. ಆದರೆ, ಪ್ಯಾಕಿಂಗ್ ಮಾಡದ ಮತ್ತು ಸ್ವೈಸ್ಡ್(ಉಪ್ಪು ಮತ್ತು ಮಸಾಲೆ ಪದಾರ್ಥಗಳನ್ನು ಸೇರಿಸಿರುವ) ಪಾಪ್‌ಕಾರ್ನ್‌ಗೆ ಶೇ.12ರಷ್ಟು ಜಿಎಸ್‌ಟಿ ಇರಲಿದೆ. ಅದೇ ರೀತಿ, ಪ್ಯಾಕಿಂಗ್ ಮಾಡದ ಮತ್ತು ಲೇಬಲ್ ಮಾಡದ ಪಾಪ್‌ಕಾರ್ನ್‌ಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲು ತೀರ್ಮಾನಿಸಲಾಗಿದೆ.
ಇನ್ಸೂರೆಲ್ಸ್ ಪ್ರೀಮಿಯಮ್ ಮೇಲಿನ ತೆರಿಗೆ ಕಡಿತಗೊಳಿಸುವ ನಿರ್ಧಾರವನ್ನು ಮುಂದೂಡಲಾಗಿದೆ. ಈ ಕುರಿತು ಈ ವಲಯದ ನಿಯಂತ್ರಕರಿಂದ ಪ್ರತಿಕ್ರಿಯೆ ಪಡೆದು ಮುಂದುವರೆಯಲು ನಿರ್ಧರಿಸಲಾಗಿದೆ. ಈ ವಿಚಾರವನ್ನು ಪರಿಶೀಲಿಸಿದ್ದ ಸಚಿವರ ತಂಡ, ಟರ್ಮ್ ಲೈಫ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಪಾವತಿಸುವ ವಿಮಾ ಕಂತುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲು ಮತ್ತು ಹಿರಿಯ ನಾಗರಿಕರು ಆರೋಗ್ಯ ವಿಮಾ ರಕ್ಷಣೆಗೆ ಪಾವತಿಸುವ ಪ್ರೀಮಿಯಂಗೆ ವಿನಾಯಿತಿ ನೀಡಲು ಶಿಫಾರಸು ಮಾಡಿತ್ತು. 5 ಲಕ್ಷ ರೂ.ವರೆಗಿನ ಆರೋಗ್ಯ ವಿಮೆಗೆ ಹಿರಿಯ ನಾಗರಿಕರನ್ನು ಹೊರತುಪಡಿಸಿ ಇತರ ವ್ಯಕ್ತಿಗಳು ಪಾವತಿಸುವ ಪ್ರೀಮಿಯಂಗೆ ಜಿಎಸ್‌ಟಿ ವಿನಾಯಿತಿ ಮಾಡುವಂತೆ ಸಲಹೆ ನೀಡಿತ್ತು.