ಕರಾಚಿ (ಪಾಕಿಸ್ತಾನ):ಪಾಕಿಸ್ತಾನದ ಕೈಗಾರಿಕಾ ಮತ್ತು ಆರ್ಥಿಕ ಕೇಂದ್ರವಾಗಿರುವ, ಕಾಸ್ಮೋಪಾಲಿಟನ್ ಮಹಾನಗರ ಕರಾಚಿಯು ಆಹಾರ ರಾಜಧಾನಿಯೂ ಹೌದು. ತಿನಿಸು ಪ್ರಿಯರಿಗೆ ಇಲ್ಲಿ ಬಗೆಬಗೆಯ ಆಹಾರ, ತಿಂಡಿಗಳು ಸಿಗುತ್ತವೆ. ಆದರೆ ಈಗ ಈ ನಗರದಲ್ಲಿ ಭಾರತೀಯ ಶಾಕಾಹಾರಿ ಆಹಾರ ಪದಾರ್ಥಗಳ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅಪ್ಪಟ ಭಾರತೀಯ ರುಚಿಯನ್ನು ಹೊಂದಿರುವ ಸಸ್ಯಾಹಾರಿ ಭಕ್ಷ್ಯಗಳಾದ 'ಸೋಯಾಬೀನ್ ಆಲೂ ಬಿರಿಯಾನಿ', 'ಆಲೂ ಟಿಕ್ಕಿಸ್', 'ವಡಾ ಪಾವ್', 'ಮಸಾಲಾ ದೋಸೆ' ಮತ್ತು 'ಧೋಕ್ಲಾ' ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಹೊಸ ಟ್ರೆಂಡ್ ಆಗಿದೆ.
ಸಿಂಧ್ ಪ್ರಾಂತ್ಯದ ರಾಜಧಾನಿಯಾಗಿರುವ ಕರಾಚಿಯಲ್ಲಿ ಅತ್ಯಂತ ದುಬಾರಿ ಯುರೋಪಿಯನ್ ಮತ್ತು ಇಟಾಲಿಯನ್ ಡಿಶ್ಗಳಿಂದ ಹಿಡಿದು ಕೈಗೆಟುಕುವ ಚೈನೀಸ್ ಆಹಾರ ಅಥವಾ ಇನ್ನೂ ಅಗ್ಗದ ಬನ್ ಕಬಾಬ್ವರೆಗೆ ಸಾಕಷ್ಟು ವೆರೈಟಿಯ ಆಹಾರ ಪದಾರ್ಥಗಳು ಲಭ್ಯವಿವೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಆಹಾರ ಪ್ರಿಯರು ಶುದ್ಧ ಸಸ್ಯಾಹಾರಿ ಭಕ್ಷ್ಯಗಳ ರುಚಿಗೆ ಮಾರು ಹೋಗಿರುವುದು ವಿಶಿಷ್ಟವಾಗಿದೆ.
ಕರಾಚಿಯ ಹೊಸ ಸಸ್ಯಾಹಾರಿ ಟ್ರೆಂಡ್ ಬಗ್ಗೆ ಕರಾಚಿಯಲ್ಲಿ ಹೊಟೇಲ್ ನಡೆಸುತ್ತಿರುವ ಮಹೇಶ್ ಕುಮಾರ್ ಎಂಬುವರು ಮಾತನಾಡಿ, ಕರಾಚಿಯಲ್ಲಿ "ಶುದ್ಧ ಸಸ್ಯಾಹಾರಿ ಭಾರತೀಯ ಭಕ್ಷ್ಯಗಳು" ಎಂದು ಕರೆಯಲ್ಪಡುವ ಸಸ್ಯಾಹಾರಿ ಊಟದ ಬಗ್ಗೆ ಜನರಲ್ಲಿ ಒಲವು ಹೆಚ್ಚಾಗಿರುವುದರಿಂದ ತಮ್ಮ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು. ಮಹೇಶ್ ಕುಮಾರ್ ಅವರು ಎಂ.ಎ. ಜಿನ್ನಾ ರಸ್ತೆಯ ಐತಿಹಾಸಿಕ ಓಲ್ಡ್ ಕಾಂಪೌಂಡ್ ಒಳಗೆ ಸಣ್ಣ 'ಮಹಾರಾಜ್ ಕರಮ್ ಚಂದ್ ಸಸ್ಯಾಹಾರಿ ಫುಡ್ಸ್ ಇನ್' ಹೆಸರಿನ ಹೊಟೇಲ್ ನಡೆಸುತ್ತಾರೆ.
ವಿಭಜನೆಯ ಮೊದಲು ಹಿಂದೂಗಳು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಶಾಂತಿ ಮತ್ತು ಸಾಮರಸ್ಯದಿಂದ ವಾಸಿಸುತ್ತಿದ್ದ ನಾರಾಯಣ್ ಕಾಂಪೌಂಡ್ ಅಥವಾ ಓಲ್ಡ್ ಕಾಂಪೌಂಡ್ ಪ್ರದೇಶದಲ್ಲಿ ಈ ರೆಸ್ಟೋರೆಂಟ್ ಮಾತ್ರವಲ್ಲದೆ ಶತಮಾನಗಳಷ್ಟು ಹಳೆಯದಾದ ಸ್ವಾಮಿನಾರಾಯಣ ದೇವಾಲಯ ಮತ್ತು ಗುರುದ್ವಾರಗಳು ಸಹ ಇವೆ.
ಆರಂಭದಲ್ಲಿ ಕಾಂಪೌಂಡ್ ನಿವಾಸಿಗಳಿಗಾಗಿ ಆರಂಭಿಸಲಾದ ಮಹಾರಾಜ್ ಕರಮ್ ಚಂದ್ ಇನ್ ಹೊಟೇಲ್ ಈಗ ಇದರ ಎದುರಿನಲ್ಲಿಯೇ ಇರುವ ನ್ಯಾಯಾಲಯಕ್ಕೆ ಬರುವ ವಕೀಲರು ಮತ್ತು ಇತರ ಜನತೆಗೆ ಜನಪ್ರಿಯ ಊಟದ ತಾಣವಾಗಿ ಮಾರ್ಪಟ್ಟಿದೆ.
"ನಮ್ಮ ಸೋಯಾಬೀನ್ ಆಲೂ ಬಿರಿಯಾನಿ, ಆಲೂ ಟಿಕ್ಕಿಸ್, ಪನೀರ್ ಕಡಾಯಿ ಮತ್ತು ಮಿಕ್ಸ್ ವೆಜಿಟೆಬಲ್ ನಂಥ ತಿಂಡಿಗಳನ್ನು ಜನ ಹೆಚ್ಚು ಇಷ್ಟ ಪಟ್ಟಿದ್ದಾರೆ. ಮಧ್ಯಾಹ್ನದ ಊಟದ ಸಮಯದಲ್ಲಿ ಸಾಕಷ್ಟು ಜನ ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ ಮತ್ತು ಆ ಸಮಯದಲ್ಲಿ ತುಂಬಾ ರಷ್ ಇರುತ್ತದೆ " ಎಂದು ಕುಮಾರ್ ಹೇಳಿದರು.
ಹಿಂದೂಗಳು ತಯಾರಿಸಿದ ಆಹಾರವನ್ನು ಮುಸ್ಲಿಮರು ತಿನ್ನಬಾರದು ಎಂಬ ಧಾರ್ಮಿಕ ನಂಬಿಕೆಯನ್ನು ಹೊಂದಿರುವ ಕೆಲ ಮುಸ್ಲಿಂ ಸಂಪ್ರದಾಯವಾದಿಗಳು ಇನ್ನೂ ಇರುವುದರಿಂದ ತಮ್ಮ ರೆಸ್ಟೋರೆಂಟ್ ಬಗ್ಗೆ ತಾವಾಗಿಯೇ ಪ್ರಚಾರ ಮಾಡುವುದಿಲ್ಲ ಎಂದು ಕುಮಾರ್ ಹೇಳಿದರು.