ಕರ್ನಾಟಕ

karnataka

ETV Bharat / business

ಪಂಜಾಬ್​ನಲ್ಲಿ 85 ಲಕ್ಷ ಟನ್ ಭತ್ತ ಖರೀದಿಸಿದ ಕೇಂದ್ರ: ರೈತರಿಗೆ 19,800 ಕೋಟಿ ರೂ. ಪಾವತಿ

ಕೇಂದ್ರ ಸರ್ಕಾರ ಪಂಜಾಬ್ ರೈತರಿಂದ ಈವರೆಗೆ 85 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಿದೆ.

ಭತ್ತದ ರಾಶಿ
ಭತ್ತದ ರಾಶಿ (IANS)

By ETV Bharat Karnataka Team

Published : Nov 3, 2024, 6:56 PM IST

ನವದೆಹಲಿ: ಭಾರತೀಯ ಆಹಾರ ನಿಗಮ (ಎಫ್​ಸಿಐ) ಮತ್ತು ರಾಜ್ಯ ಏಜೆನ್ಸಿಗಳು ಪಂಜಾಬ್​ನಲ್ಲಿ 85.41 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಭತ್ತವನ್ನು ಖರೀದಿಸಿವೆ ಎಂದು ಕೇಂದ್ರ ಆಹಾರ ಸಚಿವಾಲಯ ರವಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. 2024-2025ರ ಖಾರಿಫ್ ಮಾರುಕಟ್ಟೆ ಋತುವಿನ ನವೆಂಬರ್​ನಲ್ಲಿ ಈ ಖರೀದಿ ಮಾಡಲಾಗಿದೆ.

ಭತ್ತ ಖರೀದಿಗೆ ಪ್ರತಿಯಾಗಿ ಕೇಂದ್ರವು ಈಗಾಗಲೇ ಪಂಜಾಬಿನ 4 ಲಕ್ಷ ರೈತರಿಗೆ 19,800 ಕೋಟಿ ರೂ.ಗಳನ್ನು ಪಾವತಿಸಿದ್ದು, ರಾಜ್ಯದಲ್ಲಿ ಭತ್ತದ ಖರೀದಿ ಭರದಿಂದ ಸಾಗಿದೆ. ಗೋದಾಮು ಸೌಲಭ್ಯಗಳನ್ನು ಹೊಂದಿರುವುದರಿಂದ ರಾಜ್ಯ ಏಜೆನ್ಸಿಗಳು ಕೂಡ ಕೇಂದ್ರದ ಪರವಾಗಿ ಭತ್ತವನ್ನು ಖರೀದಿಸುತ್ತಿವೆ.

"ನವೆಂಬರ್ 2, 2024 ರ ಹೊತ್ತಿಗೆ, ಒಟ್ಟು 90.69 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಭತ್ತವು ಪಂಜಾಬ್ ಮಂಡಿಗಳಿಗೆ ಬಂದಿದೆ. ಇದರಲ್ಲಿ 85.41 ಎಲ್ಎಂಟಿ ಭತ್ತವನ್ನು ರಾಜ್ಯ ಏಜೆನ್ಸಿಗಳು ಮತ್ತು ಎಫ್​ಸಿಐ ಖರೀದಿಸಿವೆ. ಗ್ರೇಡ್ 'ಎ' ಭತ್ತಕ್ಕೆ ಭಾರತ ಸರ್ಕಾರ ನಿರ್ಧರಿಸಿದಂತೆ ಪ್ರತಿ ಕ್ವಿಂಟಾಲ್​ಗೆ 2320 ರೂ.ಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಇದಲ್ಲದೆ, 4,640 ಮಿಲ್​ಗಳು ಭತ್ತದಿಂದ ಅಕ್ಕಿಯನ್ನು ತೆಗೆಯಲು ಅರ್ಜಿ ಸಲ್ಲಿಸಿವೆ ಮತ್ತು 4,132 ಮಿಲ್​ಗಳಿಗೆ ಪಂಜಾಬ್ ಸರ್ಕಾರ ಈಗಾಗಲೇ ಕೆಲಸವನ್ನು ಮಂಜೂರು ಮಾಡಿದೆ. ಪಂಜಾಬಿನಲ್ಲಿ 2024-25ರ ಮಾರುಕಟ್ಟೆ ಋತುವಿನ ಭತ್ತದ ಖರೀದಿಯು ಅಕ್ಟೋಬರ್ 1 ರಿಂದ ಪ್ರಾರಂಭವಾಗಿದೆ ಮತ್ತು ರೈತರಿಂದ ಸುಗಮ ಖರೀದಿಗಾಗಿ ರಾಜ್ಯಾದ್ಯಂತ 2,927 ಗೊತ್ತುಪಡಿಸಿದ ಮಂಡಿಗಳು ಮತ್ತು ತಾತ್ಕಾಲಿಕ ಯಾರ್ಡ್​ಗಳು ಕಾರ್ಯನಿರ್ವಹಿಸುತ್ತಿವೆ.

2024-25ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ 185 ಎಲ್ಎಂಟಿಯಷ್ಟು ಭತ್ತ ಸಂಗ್ರಹಣೆಯ ಅಂದಾಜು ಗುರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಇದು ನವೆಂಬರ್ 30 ರವರೆಗೆ ಮುಂದುವರಿಯುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್​ನಲ್ಲಿ ಭಾರಿ ಮಳೆ ಮತ್ತು ಭತ್ತದಲ್ಲಿ ಹೆಚ್ಚಿನ ತೇವಾಂಶದಿಂದಾಗಿ ಖರೀದಿ ಸ್ವಲ್ಪ ತಡವಾಗಿ ಪ್ರಾರಂಭವಾಗಿದ್ದರೂ, ಅದು ಮತ್ತೆ ಹಳಿಗೆ ಮರಳಿದೆ ಮತ್ತು ಈಗ ಪೂರ್ಣ ಪ್ರಮಾಣದಲ್ಲಿ ವೇಗ ಪಡೆದುಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎಂಎಸ್​ಪಿ ಇದು ಕೇಂದ್ರವು ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸುವ ಬೆಲೆಯಾಗಿದೆ. ರೈತರು ತಮ್ಮ ಬೆಳೆ ಮಾದರಿಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುವ ಸಲುವಾಗಿ ಬಿತ್ತನೆ ಋತುವಿಗೆ ಮುಂಚಿತವಾಗಿ ಬೆಲೆಯನ್ನು ಘೋಷಿಸಲಾಗುತ್ತದೆ. ಕಳೆದ ತಿಂಗಳು, ಕೇಂದ್ರ ಸಚಿವ ಸಂಪುಟವು ಏಪ್ರಿಲ್​ನಿಂದ ಪ್ರಾರಂಭವಾಗುವ 2025-26 ಮಾರುಕಟ್ಟೆ ಋತುವಿನಲ್ಲಿ ಈಗ ಬಿತ್ತನೆ ಮಾಡುತ್ತಿರುವ ಗೋಧಿಯಂತಹ ರಾಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್ ಪಿ) ಶೇಕಡಾ 7 ರಷ್ಟು ಹೆಚ್ಚಿಸಿದೆ.

ಇದನ್ನೂ ಓದಿ : 4 ತಿಂಗಳ ಖರೀದಿಯ ನಂತರ ಎಫ್​ಪಿಐಗಳಿಂದ 94 ಸಾವಿರ ಕೋಟಿ ಮೌಲ್ಯದ ಷೇರು ಮಾರಾಟ

ABOUT THE AUTHOR

...view details