ನವದೆಹಲಿ: 2023-24 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರ್ತಿ ಏರ್ಟೆಲ್ನ ಏಕೀಕೃತ ನಿವ್ವಳ ಲಾಭ ಶೇಕಡಾ 31 ರಷ್ಟು ಕುಸಿತವಾಗಿದೆ. ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್ಟೆಲ್ನ ನಿವ್ವಳ ಲಾಭ ಕುಸಿದು 2,072 ಕೋಟಿ ರೂ.ಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭ 3,006 ಕೋಟಿ ರೂ. ಆಗಿತ್ತು.
ಸುನಿಲ್ ಮಿತ್ತಲ್ ನೇತೃತ್ವದ ಏರ್ಟೆಲ್ ಈ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಬರುವ ಆದಾಯದಲ್ಲಿ ಶೇಕಡಾ 4 ರಷ್ಟು ಹೆಚ್ಚಳ ದಾಖಲಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 36,009 ಕೋಟಿ ರೂ.ಗಳಿಂದ 37,599 ಕೋಟಿ ರೂ.ಗೆ ತಲುಪಿದೆ. ಕಂಪನಿಯ ನಿರ್ದೇಶಕರ ಮಂಡಳಿಯು 5 ರೂ. ಮುಖಬೆಲೆಯ ಪ್ರತಿ ಷೇರಿಗೆ 8 ರೂ.ಗಳ ಲಾಭಾಂಶ ನೀಡುವಂತೆ ಶಿಫಾರಸು ಮಾಡಿದೆ.
"ನೈಜೀರಿಯನ್ ಕರೆನ್ಸಿ ನೈರಾ ಅಪಮೌಲ್ಯದಿಂದಾಗಿ ಕಂಪನಿಯ ಏಕೀಕೃತ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿದೆ. ಗ್ರಾಹಕರ ಸಂಖ್ಯೆ ಮತ್ತು ಹಣಕಾಸು ಲಾಭ ಹೀಗೆ ಎಲ್ಲಾ ವ್ಯವಹಾರಗಳಲ್ಲಿ ನಾವು ಕಳೆದ ವರ್ಷವನ್ನು ಉತ್ತಮ ಕಾರ್ಯಕ್ಷಮತೆಯೊಂದಿಗೆ ಕೊನೆಗೊಳಿಸಿದ್ದೇವೆ. ತ್ರೈಮಾಸಿಕದಲ್ಲಿ ಒಂದು ದಿನ ಕಡಿಮೆ ಇದ್ದರೂ, ಇಬಿಐಟಿಡಿಎ ಮಾರ್ಜಿನ್ ಶೇಕಡಾ 54.1 ಕ್ಕೆ ವಿಸ್ತರಿಸುವುದರೊಂದಿಗೆ ಭಾರತದ ಆದಾಯ (ಬೀಟೆಲ್ಗೆ ಸರಿಹೊಂದಿಸಲಾಗಿದೆ) ಶೇಕಡಾ 1.7 ರಷ್ಟು ಹೆಚ್ಚಾಗಿದೆ." ಎಂದು ಏರ್ಟೆಲ್ ಎಂಡಿ ಗೋಪಾಲ್ ವಿಠಲ್ ಹೇಳಿದ್ದಾರೆ.